ಕಾಣೆಯಾಗಿದ್ದ ಸಾಕಮ್ಮ 23 ವರ್ಷದ ಬಳಿಕ ಕುಟುಂಬಕ್ಕೆ ಸೇರ್ಪಡೆ!|Missing Sakamma joined the family after 23 years!

hc
Published on

ಬೆಂಗಳೂರು: ಆಕೆ ಸುಮಾರು 23 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ. ಸಾಮಾಜಿಕ ಕಾರ್ಯಕರ್ತರೊಬ್ಬರ ಟ್ವೀಟ್ ಅವಳನ್ನು ಮತ್ತೆ ಕುಟುಂಬಕ್ಕೆ ಸೇರ್ಪಡೆ(Missing Sakamma joined the family after 23 years!) ಮಾಡಿದೆ.

50 ವರ್ಷದ ಮಹಿಳೆ ಸಾಕಮ್ಮ ಅವರು ಹಲವು ವರ್ಷಗಳ ನಂತರ ತನ್ನ ಕುಟುಂಬವನ್ನು ಸೇರಿದ್ದಾರೆ. ಈ ಘಟನೆಯು ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿಜಾನ್’ ಸಿನಿಮಾವನ್ನು ನೆನಪಿಸುತ್ತಿದೆ!

ಹೊಸಪೇಟೆಯ ದಣನಾಯಕನಕೆರೆಯ ಸಾಕಮ್ಮ ಅವರು ಕುಟುಂಬಕ್ಕೆ ಸೇರ್ಪಡೆಯಾಗಲು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಜಿ. ವಿಜಯಕುಮಾರ ಕಾರಣರಾಗಿದ್ದಾರೆ.

ಈಕೆಯನ್ನು ಕರೆತರಲು ಕಾರಣರಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡವನ್ನು ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಭಿನಂದಿಸಿದರು.

ಸಾಕಮ್ಮಅವರನ್ನು ಅವರ ಕುಟುಂಬಕ್ಕೆ ಒಪ್ಪಿಸಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಮಹದೇವಪ್ಪ, 23 ವರ್ಷಗಳ ಹಿಂದೆ ತನ್ನ ಕುಟುಂಬ ತೊರೆದು ಕಾಣೆಯಾಗಿದ್ದ ಸಾಕಮ್ಮ ಎರಡು ವರ್ಷಗಳ ಹಿಂದೆ ತಿಳಿಯದೇ ಕರ್ನಾಟಕದಿಂದ ರೈಲಿನ ಮೂಲಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ತಲುಪಿ, ಕುಟುಂಬದವನ್ನು ಸೇರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂಬ ವಿಚಾರವನ್ನು ಕರ್ನಾಟಕ ಮೂಲದವರಾದ ಉತ್ತರಾಖಂಡದ ಐ.ಪಿ.ಎಸ್. ಅಧಿಕಾರಿ ರವಿನಂದನ್ ಅವರ ಮೂಲಕ ಮಾಹಿತಿ ಪಡೆದಿದ್ದ ಸಾಮಾಜಿಕ ಕಾರ್ಯಕರ್ತ ಜಿ.ವಿಜಯಕುಮಾರ ಎಂಬುವರು ಈ ವಿಷಯವನ್ನು 2024 ರ ಡಿಸೆಂಬರ್ 19 ರಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರನ್ನು ಟ್ವೀಟ್ ಮೂಲಕ ಟ್ಯಾಗ್ ಮಾಡಿ ಸಹಾಯ ಕೋರಿದ್ದರು.

ಅದರಂತೆ ಮಣಿವಣ್ಣನ್ ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಟ್ಯಾಗ್ ಮಾಡಿ ಮಹಿಳೆಯನ್ನು ಮರಳಿ ಕರ್ನಾಟಕಕ್ಕೆ ಕರೆತರುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದರು. ಸಾಕಮ್ಮನವರ ವಿಷಯವು ನನ್ನ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ, ಅಧಿಕಾರಿಗಳ ತಂಡವನ್ನು ವಿಮಾನದ ಮೂಲಕ ಕಳುಹಿಸಿ ಸಾಕಮ್ಮನವರನ್ನು ವಿಮಾನದಲ್ಲೇ ಸುರಕ್ಷಿತವಾಗಿ ಕರೆತರಲಾಯಿತು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಯು ಈ ಕುರಿತು ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ನಾಗೇಶ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಾಗೂ ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅವರನ್ನು ಸಂರ್ಪಕಿಸಿತು. ಎರಡು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಅವರೊಂದಿಗೆ ಸಮನ್ವಯ ಸಾಧಿಸಿ, ಅನುಮೋದನೆ ಪಡೆದು ಅವರ ನಿರ್ದೇಶನದಂತೆ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದರು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧೀಕ್ಷಕ ಬಸವರಾಜ, ಬಳ್ಳಾರಿ ಜಿಲ್ಲೆಯ ಎನ್.ಪಿ.ಕೆ ಕೇಂದ್ರದ ವಾರ್ಡನ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಭಾರತಿ ಅವರು ಕಾರ್ಯಾಚರಣೆ ತಂಡದಲ್ಲಿ ಇದ್ದರು ಎಂದು ತಿಳಿಸಿದರು.

ಈ ತಂಡವು 2024 ರ ಡಿಸೆಂಬರ್ 21 ರಂದು ಸಾಕಮ್ಮ ಅವರು ಇದ್ದ ಹಿಮಾಚಲ ಪ್ರದೇಶದ ಮಂಡಿ ಜಲ್ಲೆಯ ಬಾಲ್ವಲಿ ಕಲ್ಯಾಣ ಸಭಾ (ವೃದ್ಧಾಶ್ರಮ)ವನ್ನು ತಲುಪಿದರು. ಸಾಕಮ್ಮ ಅವರ ಆರೋಗ್ಯವನ್ನು ವಿಚಾರಿಸಿದ ಅಧಿಕಾರಿಗಳು ವೀಡಿಯೋ ಕರೆ ಮೂಲಕ ಸಾಕಮ್ಮ ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಆಕೆಗೆ 3 ಮಕ್ಕಳಿದ್ದು, ಅವರು ತಮ್ಮ ತಾಯಿಯನ್ನು ಸ್ವೀಕರಿಸಲು ಕಾತುರರಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡು ವಿಡಿಯೋ ಮೂಲಕ ಮಾಹಿತಿ ನೀಡಿದರು.

ಡಿ.24 ರಂದು ಸಾಕಮ್ಮ ಅವರನ್ನು ವಿಮಾನದ ಮೂಲಕ ಕರೆತರಲಾಗಿದ್ದು, ಅವರನ್ನು ಅವರ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ ಎಂದು ಮಹದೇವಪ್ಪ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಿ.ರಣದೀಪ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net