

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ಪಿಎಚ್‌ಡಿ ವಿದ್ಯಾರ್ಥಿ ಉಗ್ರ ಸಂಘಟನೆ ಸೇರಿಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ.
ಕಳೆದ ಒಂದು ವಾರದಿಂದ ಕಾಣೆಯಾಗಿದ್ದ ಮಗ ಹಿಲಾಲ್ ಅಹ್ಮದ್ ದಾರ್‌ನನ್ನು ಇತ್ತ ಪಾಲಕರು ಹುಡುಕಾಡುತ್ತಿದ್ದರೆ, ಅತ್ತ ಆತ ಉಗ್ರ ಸಂಘಟನೆ ಸೇರಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಜೂನ್ 13ರಂದು ಹಿಲಾಲ್ ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಮಧ್ಯ ಕಾಶ್ಮೀರದ ಗಂಡರ್‌ಬಲ್ ಜಿಲ್ಲೆಯ ಎತ್ತರದ ನಾರನಾಗ್ ಪ್ರದೇಶಕ್ಕೆ ಚಾರಣಕ್ಕೆ ಹೋಗಿದ್ದ. ಅದೇ ಸಂಜೆ ಅವರೆಲ್ಲಾ ಮರಳಬೇಕಿತ್ತು. ಅದರಂತೆ ಉಳಿದ ಸ್ನೇಹಿತರು ಮನೆಗೆ ಮರಳಿದ್ದರು. ಹಿಲಾಲ್ ಕಾಣೆಯಾಗಿದ್ದ. ಸ್ನೇಹಿತರನ್ನು ವಿಚಾರಿಸಿದಾಗ ತಮ್ಮ ಸಂಗಡವೇ ಇದ್ದ ಆತ ಏಕಾಏಕಿ ಎಲ್ಲಿ ಹೋದ ಎಂದು ತಮಗೆ ತಿಳಿಯಲಿಲ್ಲ ಎಂದಿದ್ದಾರೆ.
ಪಾಲಕರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಎಷ್ಟೇ ಹುಡುಕಾಟ ನಡೆಸಿದರೂ ಆತ ಕಾಣಿಸಿರಲಿಲ್ಲ. ಇದರಿಂದಾಗಿ ರೊಚ್ಚಿಗೆದ್ದಿದ್ದ ಪಾಲಕರು ಪ್ರತಿಭಟನೆ ಕೂಡ ಮಾಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ನಡೆಸಿದ ತನಿಖೆಯಿಂದ ಆತ ಉಗ್ರ ಸಂಘಟನೆ ಸೇರಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ, ಉಗ್ರಗಾಮಿ ಗುಂಪಿಗೆ ಸೇರಿರುವ ಬಗ್ಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಿಲಾಲ್‌ನ ಮನವೊಲಿಸಿ ಆತನನ್ನು ವಾಪಸ್ ಕರೆತರಬಹುದೇ ಎಂಬ ಬಗ್ಗೆ ಎಲ್ಲಾ ನಿಟ್ಟಿನಲ್ಲಿಯೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)