ಹಾಸನದಲ್ಲಿ ಪೈಪ್​ ಮೂಲಕ ಎಸ್​ಐ ವಸತಿಗೃಹಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

Hassan SI Shobha
Published on

ಹಾಸನ: ದುಷ್ಕರ್ಮಿಗಳ ಗುಂಪೊಂದು ಪೊಲೀಸ್ ಸಬ್ ಇನ್ಸ್​ಪೆಕ್ಟರ್ ವಸತಿಗೃಹಕ್ಕೆ ಬೆಂಕಿ ಹಚ್ಚಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ಶೋಭಾ ಅವರ ವಸತಿ ಗೃಹಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕಿಟಕಿ ಗಾಜು ಒಡೆದು ಬೆಂಕಿ‌ ಹಚ್ಚಿದ್ದು, ಈ ಕೃತ್ಯದಿಂದಾಗಿ ಮನೆಯೊಳಗಿದ್ದ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿ ಆಗಿವೆ.

ಶೋಭಾ ಅವರು ಮೂರು ದಿನಗಳಿಂದ ರಜೆ ಮೇಲೆ ತೆರಳಿದ್ದರು. ಇದೇ ಸಮಯವನ್ನು ನೋಡಿಕೊಂಡು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಶೋಭಾ ಅವರು ನೀಡಿರುವ ದೂರಿನ ಆಧಾರದ ಮೇಲೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಸಾರಾಂಶ ಈ ಕೆಳಕಂಡಂತಿದೆ

ಪಿರ್ಯಾದುದಾರರು (ಶೋಭಾ) 4 ತಿಂಗಳಿಂದ ಕೊಣನೂರು ಪೊಲೀಸ್​ ಠಾಣೆಯಲ್ಲಿ ಆರಕ್ಷಕ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊಣನೂರು ಗ್ರಾಮದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತಾರೆ. ಅವರ ಸ್ವಂತ ಗ್ರಾಮವು ಗದಗ ಜಿಲ್ಲೆಯಾದ್ದರಿಂದ ಮೇಲಾಧಿಕಾರಿಗಳಿಂದ 2023 ಮೇ 21ರಿಂದ ಮೇ 24ರವರೆಗೆ ರಜೆ ಪಡೆದುಕೊಂಡು ಮೇ 20ರಂದು ರಾತ್ರಿ 10 ಗಂಟೆಗೆ ಕೊಣನೂರು ಗ್ರಾಮದಿಂದ ಸ್ವಗ್ರಾಮ ಹೋಗಲು ಮೇಲಾಧಿಕಾರಿಗಳಿಗೆ ತಿಳಿಸಿ ಹೋಗಿದ್ದೆನು. ಮೇ 25ರಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ವಾಪಸ್​ ಕೊಣನೂರು ಗ್ರಾಮಕ್ಕೆ ಬರುತ್ತಿರುವಾಗ ನಾನು ವಾಸವಿರುವ ಮನೆಯ ಪಕ್ಕದ ನಿವಾಸಿ ನಾರಾಯಣ ಅವರು ನನಗೆ ದೂರವಾಣಿ ಕರೆಮಾಡಿ ಯಾರೋ ವ್ಯಕ್ತಿಗಳ ನೀವು ವಾಸವಿರುವ ಮನೆಯ ಹಿಂಭಾಗದ ರೂಮಿನ ಕಿಟಕಿಯ ಗಾಜನ್ನು ಒಡೆದುಹಾಕಿ ಸೀಮೆ ಎಣ್ಣೆಯನ್ನು ರೂಮಿನ ಒಳಗೆ ಸುರಿದು ರೂಮಿನ ಒಳಭಾಗಕ್ಕೆ ಬೆಂಕಿ ಹಾಕಿದ್ದಾರೆ. ರೂಮಿನ ಒಳಭಾಗದಲ್ಲಿರುವ ವಸ್ತುಗಳು ಸುಟ್ಟು ಹೋಗಿರುತ್ತವೆಂದು ನಾರಾಯಣ ಅವರು ತಿಳಿಸಿದರು. ನಂತರ ನಾನು ಬೆಳಗ್ಗೆ 8 ಗಂಟೆಗೆ ಸಮಯಕ್ಕೆ ಕೊಣನೂರು ಮನೆಯ ಹತ್ತಿರಕ್ಕೆ ಬಂದು ನೋಡಿದಾಗ ಯಾರೋ ದುಷ್ಕರ್ಮಿಗಳು ನನ್ನ ಮೇಲಿನ ಯಾವುದೋ ದ್ವೇಷದಿಂದ ನನಗೆ ತೊಂದರೆ ನೀಡುವ ಉದ್ದೇಶದಿಂದ ಮೇ 24 ರಂದು ರಾತ್ರಿ ಯಾವುದೋ ಸಮಯದಲ್ಲಿ, ನಾನು ವಾಸವಿದ್ದೇನೆ ಅಂದುಕೊಂಡು ಮನೆಯ ಹಿಂಭಾಗದ ಕಿಟಕಿಯ ಗಾಜನ್ನು ಒಡೆದು ಸೀಮೆ ಎಣ್ಣೆಯನ್ನು, ರೂಮಿನ ಒಳಭಾಗಕ್ಕೆ ಪೈಪ್​ನಿಂದ ಸುರಿದು ಸಾಯಿಸುವ ಉದ್ದೇಶಿದಿಂದೇ ಬೆಂಕಿಹಾಕಿರುತ್ತಾರೆ. ಇದರಿಂದ ರೂಮಿನಲ್ಲಿ ಬ್ಯಾಗ್​ ಸಹಿತ ಇದ್ದ ಸುಮಾರು 80000 ರೂ. ಬೆಲೆಬಾಳುವ ಎಚ್​ಪಿ ಕಂಪನಿಯ ಲ್ಯಾಪ್ ಟಾಪ್, ಸುಮಾರು 25,000 ರೂ ಬೆಲೆಬಾಳುವ ಡ್ರೆಸ್ಸಿಂಗ್​ ಟೇಬಲ್​ ಹಾಗೂ ಅದರ ಒಳಗಿದ್ದ ವಸ್ತುಗಳು, ಸುಮಾರು 60000 ರೂ. ಬೆಲೆಬಾಳುವ ಮರದ ಮಂಚ ಮತ್ತು ಅದರ ಮೇಲಿದ್ದ ಹಾಸಿಗೆ ಮತ್ತು ಒರಿಜಿನಲ್ ದಾಖಲಾತಿಗಳು ಹಾಗೂ ಸುಮಾರು 50000 ರೂ. ಬೆಲೆಬಾಳುವ ಬಟ್ಟೆಗಳು ಸುಟ್ಟುಹೋಗಿದ್ದು, ಇದರಿಂದ ನನಗೆ ಸುಮಾರು 2,15,000 ರೂ. ನಷ್ಟ ಉಂಟಾಗಿರುತ್ತದೆ. ನನ್ನ ಮನೆಗೆ ಬೆಂಕಿ ಹಾಕಿ ಸುಟ್ಟು, ನಷ್ಟ ಉಂಟುಮಾಡಿರುವ ದುಷ್ಕರ್ಮಿಗಳನ್ನು, ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಶೋಭಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net