ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಕಲ್ಲು ಹೊಡೆದ ದುಷ್ಕರ್ಮಿಗಳು; ಕಿಟಕಿ ಗಾಜುಗಳಿಗೆ ಹಾನಿ

Vande Bharat Express
Published on

ಬೆಂಗಳೂರು: ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ದುಷ್ಕರ್ಮಿಗಳು ಕಲ್ಲು ಹೊಡೆದು ಹಾನಿ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್. ಪುರ ಕಂಟೋನ್ಮೆಂಟ್ ವಲಯದಲ್ಲಿ ನಡೆದಿದೆ. ಕಿಡಿಗೇಡಿಗಳು ಚೆನೈ- ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಕಲ್ಲು ಎಸೆದಿದ್ದಾರೆ.

ಕಲ್ಲು ಎಸೆದ ರಭಸಕ್ಕೆ ರೈಲಿನ ಗಾಜುಗಳಿಗೆ ಹಾನಿಯುಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆ ನಿನ್ನೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯ ಬಳಿಕ ರೈಲಿನ ಸಿಬ್ಬಂದಿಗಳು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ರೈಲಿನ ಎರಡು ಬೋಗಿಗಳ ನಾಲ್ಕು ಕಿಟಕಿ ಗಾಜುಗಳಿಗೆ ಹಾನಿಯುಂಟಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ರೈಲು ಸಂಚರಿಸುವ ಪ್ರಮುಖ ಜಂಕ್ಷನ್​ಗಳಲ್ಲಿ ಸ್ಥಳೀಯ ಪೊಲೀಸರು ಟ್ರ್ಯಾಕ್ ಪೆಟ್ರೋಲಿಂಗ್ ಮಾಡುತ್ತಿದ್ದಾರೆ. ಸದ್ಯ ರೈಲಿಗೆ ಹಾನಿಯುಂಟು ಮಾಡಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net