

ಗುರುವಾಯೂರು: ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಯಾಂತ್ರಿಕ ಜಲಗಾರವನ್ನು (ರೋಬಾಟಿಕ್ ಸ್ಕ್ಯಾವೆಂಜರ್ಸ್) ಬಳಸಿದ ದೇಶದ ಮೊದಲ ರಾಜ್ಯವೆಂಬ ಖ್ಯಾತಿಗೆ ಕೇರಳ ಭಾಜನವಾಗಿದೆ.
ಒಳಚರಂಡಿ ಹಾಗೂ ಮಲದ ಗುಂಡಿಗಳನ್ನು ಮಾನವರು ಸ್ವಚ್ಛಗೊಳಿಸುವ ಅಪಾಯಕಾರಿ ಹಾಗೂ ಮಾನವ ಘನತೆಗೆ ಮಾರಕವಾದ ಪದ್ಧತಿಯನ್ನು ನಿವಾರಿಸುವಲ್ಲಿ ಈ ರೋಬಾಟಿಕ್ ಸ್ಕಾ್ಯವೆಂಜರ್ ಮಹತ್ವದ ಪಾತ್ರ ವಹಿಸಬಹುದೆಂದು ನಿರೀಕ್ಷಿಸಲಾಗಿದೆ.
ಕೇರಳ ಮೂಲದ ಜನ್ರೋಬಾಟಿಕ್ಸ್ ಅಭಿವೃದ್ಧಿ ಪಡಿಸಿರುವ ’ಬಂಡಿಕೂಟ್’ ಎಂಬ ಈ ಯಂತ್ರವನ್ನು ದೇವಸ್ಥಾನಗಳ ನಗರ ಗುರುವಾಯೂರಿನಲ್ಲಿ ಬಂಡಿಕೂಟ್ಗೆ ಶುಕ್ರವಾವಾರ ಚಾಲನೆ ನೀಡುವ ಮೂಲಕ ಇದನ್ನು ಬಳಕೆ ಮಾಡಿದ ಮೊದಲ ರಾಜ್ಯವೆಂಬ ಖ್ಯಾತಿಗೆ ಕೇರಳ ಭಾಜನವಾಯಿತು. ಜಲ ಸಂಪನ್ಮೂಲಗಳ ಸಚಿವೆ ರೋಶಿ ಆಗಸ್ಟಿನ್, ಕೇರಳ ಜಲ ಪ್ರಾಧಿಕಾರ ತ್ರಿಶೂರು ಜಿಲ್ಲೆಯಲ್ಲಿ ಕೈಗೊಂಡ ಗುರುವಾಯೂರು ಒಳಚರಂಡಿ ಯೋಜನೆಯಡಿಯಲ್ಲಿ ಬಂಡಿಕೂಟಕ್ಕೆ ಚಾಲನೆ ನೀಡಿದರು. ರಾಜ್ಯ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಡಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಯಂತ್ರದ ಮುಖ್ಯ ಭಾಗವಾದ ರೋಬಾಟಿಕ್ ಟ್ರೋನ್ ಘಟಕವು ಚರಂಡಿಯನ್ನು ಪ್ರವೇಶಿಸಿ ಮಾನವ ಕೈಗಳ ರೀತಿಯಲ್ಲೇ ರೋಬಾಟಿಕ್ ಕೈಗಳು ಗಲೀಜನ್ನು ಸ್ವಚ್ಛಗೊಳಿಸುತ್ತದೆ. ಈ ಯಂತ್ರ ವಾಟರ್ಪ್ರೂಫ್ ಆಗಿದ್ದು ಎಚ್ಡಿ ವಿಜನ್ ಕ್ಯಾಮರಾ ಮತ್ತು ಸೆನ್ಸರ್ಗಳನ್ನು ಹೊಂದಿವೆ. ಅವುಗಳು ಚರಂಡಿಯಲ್ಲಿರುವ ಅಪಾಯಕಾರಿ ಅನಿಲವನ್ನು ಪತ್ತೆ ಹಚ್ಚಲು ನೆರವಾಗುತ್ತವೆ.
ಸ್ಟಾರ್ಟಪ್ ಮಿಷನ್: ಕೇರಳ ಸ್ಟಾರ್ಟಪ್ ಮಿಷನ್ (ಕೆಎಸ್ಯುಎಂ) ಈಚೆಗೆ ಏರ್ಪಡಿಸಿದ್ದ ಹಡಲ್ ಗ್ಲೋಬಲ್-2022 ಸಮಾವೇಶದಲ್ಲಿ ಬಂಡಿಕೂಟ್ ‘ಕೇರಳದ ಹೆಮ್ಮೆ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.