ಜನರನ್ನು ಮನೆಯಿಂದ ಹೊರಗೆಳೆದು ಕೊಂದ ದುಷ್ಕರ್ವಿುಗಳು ; ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯಪಾಲರಿಂದ ಸ್ಥಳಕ್ಕೆ ಭೇಟಿ

marsi
Published on

ಮುರ್ಷಿದಾಬಾದ್ ಗಲಭೆ ಸಂತ್ರಸ್ತರ ಹೇಳಿಕೆ |

ಕೋಲ್ಕತ: ಜನರನ್ನು ಮನೆಗಳಿಂದ ಹೊರಗೆಳೆದು ಕೊಂದಿದ್ದಾರೆ. ಹಿಂಸಾಚಾರದ ಬಳಿಕ ಸಾವಿರಾರು ಜನರು ಮನೆಗಳನ್ನು ತೊರೆದು ಕ್ಯಾಂಪ್​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನ ಹಿಂಸಾಚಾರ ಪೀಡಿತ ಪ್ರದೇಶದ ಸಂತ್ರಸ್ತರ ಮಾತು.

ವಕ್ಪ್ (ತಿದ್ದುಪಡಿ) ಕಾಯ್ದೆ ವಿರೋಧ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದ ಮುರ್ಷಿದಾಬಾದ್​ನ ಪ್ರದೇಶಗಳಿಗೆ ಶನಿವಾರ ರಾಷ್ಟ್ರೀಯ ಮಹಿಳಾ ಆಯೋಗದ (ಎನ್​ಸಿಡಬ್ಲ್ಯು) ಅಧ್ಯಕ್ಷೆ ವಿಜಯಾ ರಹತ್ಕರ್ ಮತ್ತು ಆಯೋಗದ ಸದಸ್ಯರು ಭೇಟಿ ನೀಡಿದ್ದರು. ಈ ವೇಳೆ ಜನರು ತಮ್ಮ ಕಷ್ಟಗಳನ್ನು ಆಯೋಗದ ಸದಸ್ಯರ ಮುಂದೆ ತೋಡಿಕೊಂಡಿದ್ದು, ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಶಾಶ್ವತ ಬಿಎಸ್​ಎಫ್ ಕ್ಯಾಂಪ್​ಗಳನ್ನು ಸ್ಥಾಪಿಸಬೇಕು ಮತ್ತು ಹಿಂಸಾಚಾರದ ಕುರಿತು ಎನ್​ಐಎ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ನಾವು ಅವರ ಕಷ್ಟಗಳನ್ನು ಆಲಿಸಲು ಇಲ್ಲಿಗೆ ಬಂದಿದ್ದೇವೆ. ಹಿಂಸಾಚಾರದ ವೇಳೆ ನೀವು ಅನುಭವಿಸಿದ ಯಾತನೆ ಕಲ್ಪನೆಗೂ ಮೀರಿದ್ದು, ದಯವಿಟ್ಟು ಚಿಂತಿಸಬೇಡಿ. ದೇಶ ಮತ್ತು ಆಯೋಗ ನಿಮ್ಮೆಲ್ಲರ ಜತೆ ಇದೆ ಎಂದು ರಹತ್ಕರ್ ಬೆಟ್ಬೋನಾ ಗ್ರಾಮದ ಸಂತ್ರಸ್ತರಿಗೆ ಸಂತೈಸಿದರು. ಹಿಂಸಾಚಾರದಲ್ಲಿ ಕೆಲವರು ತಮ್ಮ ಪತಿ, ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮನೆಯಲ್ಲಿದ್ದವರನ್ನು ಹೊರಗೆಳೆದು ಕೊಲ್ಲಲಾಗಿದೆ. ಇದು ಭಯಾನಕ, ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆಗಳನ್ನು ನಾನು ಕಂಡಿಲ್ಲ. ಇದೇ ಮೊದಲ ಬಾರಿಗೆ ಇಂತಹ ಘಟನೆ ನೋಡುತ್ತಿದ್ದೇವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈ ಹಿಂಸಾಚಾರದ ಹೊಣೆ ಹೊರಬೇಕು. ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಆಯೋಗ ವರದಿ ನೀಡಲಿದೆ, ಇದೇ ವೇಳೆ ಬಿಎಸ್​ಎಫ್ ಕ್ಯಾಂಪ್ ಸ್ಥಾಪಿಸುವ ಬೇಡಿಕೆ ಬಗ್ಗೆಯೂ ತಿಳಿಸುತ್ತೇವೆ ಎಂದು ಎನ್​ಸಿಡಬ್ಲ್ಯೂ ಸದಸ್ಯೆ ಅರ್ಚನಾ ಮಜುಮ್ದಾರ್ ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿ:

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ಹಿಂಸಾಚಾರದ ವೇಳೆ ದುಷ್ಕರ್ವಿುಗಳಿಂದ ಹತ್ಯೆಗೀಡಾಗಿದ್ದ ಹರೋಗೋಬಿಂದೋ ದಾಸ್ ಮತ್ತು ಅವರ ಪುತ್ರ ಚಂದನ್ ದಾಸ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡಿದರು. ಶಂಶೇರ್​ಗಂಜ್ ಪ್ರದೇಶದ ಜಾಫ್ರಾಬಾದ್​ನಲ್ಲಿರುವ ಮನೆಗೆ ಭೇಟಿ ನೀಡಿದ ರಾಜ್ಯಪಾಲರು ಸುದ್ದಿಗಾರರೊಂದಿಗೆ ಮಾತನಾಡಿ ‘ನಾನು ಸಂತ್ರಸ್ತರ ಬೇಡಿಕೆಗಳನ್ನು ಪರಿಶೀಲಿಸುತ್ತೇನೆ. ಅವರು ಬಿಎಸ್​ಎಫ್ ಕ್ಯಾಂಪ್​ಗಾಗಿ ಬೇಡಿಕೆ ಇಟ್ಟಿದ್ದು, ಸೂಕ್ತ ಅಧಿಕಾರಿಗಳ ಬಳಿ ಈ ಕುರಿತು ರ್ಚಚಿಸುತ್ತೇನೆ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ರಾಜಭವನದ ಸಹಾಯವಾಣಿ ಸಂಖ್ಯೆಯನ್ನು ಇವರೊಂದಿಗೆ ಹಂಚಿಕೊಂಡಿದ್ದೇನೆ. ಅವರಿಗೆ ನ್ಯಾಯ ಬೇಡಿಕೆ, ನ್ಯಾಯ ಸಿಕ್ಕೇ ಸಿಗುತ್ತದೆ’ ಎಂದರು. ಮುರ್ಷಿದಾಬಾದ್ ಹಿಂಸಾಚಾರ ಘಟನೆ ಸಂಬಂಧ ಇದುವರೆಗೆ 274 ಜನರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಇಷ್ಟು ಪ್ರಮಾಣದ ಹಿಂಸೆ ನೋಡಿರಲಿಲ್ಲ

ಎನ್​ಸಿಡಬ್ಲ್ಯೂ ತಂಡದೊಂದಿಗೆ ತೆರಳಿದ್ದ ಬಿಜೆಪಿ ಶಾಸಕಿ ಶ್ರೀರೂಪ ಮಿತ್ರ ಚೌಧರಿ ‘ದಕ್ಷಿಣ ಮಾಲ್ಡಾ ನನ್ನ ಕ್ಷೇತ್ರ, ನಾನು ಕಳೆದ 12 ವರ್ಷದಿಂದ ಇಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದೆಂದೂ ಇಷ್ಟು ಪ್ರಮಾಣದ ಹಿಂಸಾಚಾರ ನೋಡಿರಲಿಲ್ಲ ಎಂದು ತಿಳಿಸಿದ್ದಾರೆ. ಎನ್​ಸಿಡಬ್ಲ್ಯೂ ತಂಡದ ಸದಸ್ಯರು ಮುರ್ಷಿದಾಬಾದ್​ನ ಧುಲಿಯಾನ್ ಪ್ರದೇಶಕ್ಕೂ ಭೇಟಿ ನೀಡಿದ್ದರು. ಶುಕ್ರವಾರ ಮಾಲ್ಡಾದಲ್ಲಿ ಸ್ಥಾಪಿಸಲಾಗಿರುವ ಶಿಬಿರಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಿ, ಹಿಂಸಾಚಾರ ಪೀಡಿತ ಪ್ರದೇಶದ ಮಹಿಳೆಯರ ಸ್ಥಿತಿ ಗತಿ ಕುರಿತು ಮಾಹಿತಿ ಪಡೆದರು. ಏಪ್ರಿಲ್ 11 ಮತ್ತು 12 ರಂದು ಮುರ್ಷಿದಾಬಾದ್​ನ ಶಂಶೇರ್​ಗಂಜ್, ಸುತಿ, ಧುನಿಯಾನ್ ಮತ್ತು ಜಂಗಿಪುರ ಪ್ರದೇಶಗಳಲ್ಲಿ ನಡೆದಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net