ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವನೆ ತಪ್ಪುಗ್ರಹಿಕೆ|reservation proposal for Muslims

ggp1
Published on

ಬೆಂಗಳೂರು: ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವನೆ(reservation proposal for Muslims) ತಪ್ಪುಗ್ರಹಿಕೆಯಾಗಿದೆ. ಈವರೆಗೂ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಕೆಲ ಶಾಸಕರು ಮತ್ತು ಮುಖಂಡರು ಕಾಮಗಾರಿಗಳಲ್ಲಿ ಶೇ. 4ರಷ್ಡು ಮೀಸಲಾತಿ ನೀಡುವಂತೆ ಮನವಿ ಮಾಡಿದ್ದಾರೆ. ಮನವಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಯವರು ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದಾರೆ. ಇಲಾಖೆಯು ಪರಿಶೀಲಿಸಿದ ಬಳಿಕ ಪ್ರಸ್ತಾವನೆಯು ಸಚಿವ ಸಂಪುಟದ ಮುಂದೆ ತರಬೇಕು. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆದ ಬಳಿಕ ಸರ್ಕಾರಿ ಆದೇಶ ಆಗಬೇಕಾಗುತ್ತದೆ ಎಂದರು,

ಯಾವುದೇ ಸಮುದಾಯವನ್ನು ತುಷ್ಟಿಕರಣ ಮಾಡುವಂತಹ ಅಗತ್ಯವಿಲ್ಲ. ಯಾವುದೇ ಸಮುದಾಯ, ಧರ್ಮದ ಬಡವರ ಅಭಿವೃದ್ಧಿಗೆ ಒತ್ತು ನೀಡುವುದು ಸರ್ಕಾರದ ಕರ್ತವ್ಯ. ಒಂದಷ್ಟು ಸವಲತ್ತು ಕಲ್ಪಿಸಿದರೆ ಅದನ್ನು ತುಷ್ಟೀಕರಣ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.

ಮರು ಸೇರ್ಪಡೆ ಮಾಡಿಕೊಳ್ಳಬಹುದು

ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರದ್ದು ತಪ್ಪಿಲ್ಲ ಎಂಬುದು ತೀರ್ಮಾನವಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.

ಈ ಹಿಂದೆ ಜಾಜ್ ಅವರ ಮೇಲೆ ಆರೋಪ ಬಂದಾಗ ತಪ್ಪಿಲ್ಲ ಎಂಬುದು ಸಾಬೀತಾದ ಬಳಿಕ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ವಾಲ್ಮೀಕಿ ನಿಗವ ಹಗರಣದ ಪ್ರಕರಣದ ತನಿಖೆ ಮುಗಿದು ನಾಗೇಂದ್ರ ಪಾತ್ರ ಏನು ಇಲ್ಲ ಎಂದು ತೀರ್ಮಾನ ಬಂದಾಗ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದರು.

ಸಚಿವ ಸಂಪುಟ ಪುನರ್ ರಚನೆ ವಿಚಾರ ನನಗೆ ಗೊತ್ತಿಲ್ಲ. ಇದಕ್ಕೆ ಮುಖ್ಯಮಂತ್ರಿಯವರು ಉತ್ತರ ನೀಡಬೇಕು. ಇದು ನಮ್ಮ ಹಂತದಲ್ಲಿ ಚರ್ಚೆ ಆಗುವುದಿಲ್ಲ. ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ ಎಂದು ಹೇಳಿದರು.

ಚುನಾವಣೆ ಕಾರಣ ಆಯೋಗ ಇಲ್ಲ

ವಿಧಾನಸಭೆ ಉಪ ಚುನಾವಣೆ ಮುಗಿದ ಬಳಿಕ ಒಳಮೀಸಲಾತಿಗೆ ಆಯೋಗ ರಚಿಸಲಾಗುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ್ದಾರೆ. ಇಷ್ಟು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಸರಿಯಾಗಿ ಮಾಡಬೇಕಾಗುತ್ತದೆ. ಇಲ್ಲವಾದರೆ ಯಾರಾದರು ಕೋರ್ಟ್‌ಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಆಯೋಗ ರಚಿಸಿದರೆ ಚುನಾವಣಾ ಆಯೋಗ ಪ್ರಶ್ನಿಸುತ್ತದೆ. ಇದೇ ಕಾರಣಕ್ಕೆ ಆಯೋಗ ರಚಿಸಿಲ್ಲ. ಚುನಾವಣೆ ಮುಗಿದ ಬಳಿಕ ಆರಂಭಿಸಲಾಗುತ್ತದೆ ಎಂದರು.

ಕೋವಿಡ್ ಹಗರಣದ ನ್ಯಾ. ಮೈಕಲ್ ಡಿ.ಕುನ್ನಾ ಅವರ ವರದಿಯನ್ನು ಉಪ ಸಮಿತಿ ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು. ಬೆಡ್ ಖರೀದಿ, ಉಪಕರಣ, ಮೆಡಿಸಿನ್ ಮತ್ತು ಟೆಸ್ಟ್ ಕಿಟ್ ಖರೀದಿ ಹೀಗೆ ಬೇರೆಬೇರೆ ವಿಚಾರಗಳಿವೆ. ಎಲ್ಲವನ್ನು ಉಪ ಸಮಿತಿಯಲ್ಲಿ ಪರಿಶೀಲಿಸಿ, ತೀರ್ಮಾನಕ್ಕೆ ಬರುತ್ತೇವೆ. ಈವರೆಗೆ ಉಪ ಸಮಿತಿ ಸಭೆ ನಡೆಸಿಲ್ಲ. ಇದಕ್ಕೆ ಡಿಸಿಎಂ ಅವರು ಅಧ್ಯಕ್ಷರಿದ್ದಾರೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ನಾ ಅವರು ಹೇಳಿರುವುದು ಸರಿ ಇದೆ. ಪುರಾವೆಗಳಿವೆ ಎಂಬುದಾದರೆ ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ನಟ ದರ್ಶನ್ ಮಧ್ಯಂತರ ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಆಗಿಲ್ಲ. ಯಾವ ದಿನಾಂಕದಲ್ಲಿ ಕೇಳಿದ್ದಾರೆ. ಯಾವಾಗ ತೀರ್ಮಾನಿಸಬೇಕು ಎಂಬುದನ್ನು

ಗೃಹ ಇಲಾಖೆ ಕಾರ್ಯದರ್ಶಿ ನಿರ್ಧರಿಸುತ್ತಾರೆ. ಮೇಲ್ಮನವಿ ಹೋಗುವುದಾದರೆ ಹೋಗಿ ಎಂದಿದ್ದೇನೆ. ಪ್ರೊಸೀಜರ್ ಅನುಸರಿಸಿಯೇ ಮುಂದುವರಿಯಬೇಕು.ಕಾನೂನು ಇಲಾಖೆಯಿಂದ ಮಾಹಿತಿ ಪಡೆಯಬೇಕು. ನಂತರ ಗೃಹ ಇಲಾಖೆ ತೀರ್ಮಾನ ಮಾಡಬೇಕು. ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬರಬೇಕು. ಇದೆಲ್ಲ ಆದ ನಂತರವೇ ಸರ್ಕಾರ ತೀರ್ಮಾನ ತಗೊಳ್ಳುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ಬಂಡಿಪುರದಲ್ಲಿ ರಾತ್ರಿ ವಾಹನ ಸಂಚಾರದಿಂದ ಹಿಂದೆ ಪ್ರಾಣಿಗಳ ಜೀವಕ್ಕೆ ಅಪಾಯವಾಗಿದೆ. ಜನರಿಗೂ ತೊಂದರೆ ಆಗಿದೆ. ಹಾಗಾಗಿ ಸಂಚಾರ ಬಂದ್ ಮಾಡಲಾಗಿತ್ತು. ಮತ್ತೆ ಸಂಚಾರಕ್ಕೆ ಅವಕಾಶ ಮಾಡಬೇಕೆಂಬ ಬೇಡಿಕೆ ಬಂದಿದೆ. ಸರ್ಕಾರ ಪರಿಶೀಲನೆ ಮಾಡುತ್ತದೆ.

-ಡಾ.ಜಿ.ಪರಮೇಶ್ವರ, ಗೃಹ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net