

ಬೆಂಗಳೂರು: ತಪ್ಪು ಗ್ರಹಿಕೆಯಿಂದ ಎರಡು ದಿನಗಳ ಅಂತರದಲ್ಲಿ ಪ್ರೇಮಿಗಳಿಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಧಾರ ಸಂಶುಕಾ ಹಾಗೂ ದಿಪೇಂದ್ರ ಕುಮಾರ್ ಮೃತ ಪ್ರೇಮಿಗಳು. ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಇಬ್ಬರು ಕೂಡ ಪಶ್ಚಿಮ ಬಂಗಾಳ ಮೂಲದವರು. ಗೆಳೆಯರಿಗೆ ಗುಡ್ ಬೈ ಎಂದು ಮೆಸೇಜ್ ಮಾಡಿ ಐದು ದಿನಗಳ ಹಿಂದಷ್ಟೇ ದಿಪೇಂದ್ರ ಕುಮಾರ್ ನೇಣು ಬಿಗಿದುಕೊಂಡು ಮೃತಪಟ್ಟಿದ್ದ. ಪರಿಶೀಲನೆ ನಡೆಸಿದಾಗ ಪ್ರೇಮ ವೈಫಲ್ಯದಿಂದ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿತ್ತು. ಪ್ರೇಯಸಿಯನ್ನು ಆಕೆಯ ಮನೆಯವರು ಕರೆದೊಯ್ದಿದ್ದಾರೆ ಅಂತಾ ಭಾವಿಸಿ, ಮನನೊಂದು ದೀಪೇಂದ್ರ ಸಾವಿಗೆ ಶರಣಾಗಿದ್ದ. ಯುವಕನ ಕುಟುಂಬದ ಮಾಹಿತಿ ಅನ್ವಯ ಮಾರತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಎರಡು ದಿನಗಳ ಹಿಂದಷ್ಟೇ ಕಟ್ಟಡದ ಮೇಲಿಂದ ಹಾರಿ ಓರ್ವ ಯುವತಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಹೆಸರು ಧಾರ ಸಂಶುಕಾ. ಪರಿಶೀಲನೆ ವೇಳೆ ಆಕೆಯು ಸಹ ಪ್ರೇಮವೈಫಲ್ಯಕ್ಕೆ ಆತ್ಮಹತ್ಯೆ ಎಂಬುದು ತಿಳಿದುಬಂದಿದೆ. ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ದೀಪೇಂದ್ರನ ಜೊತೆಗಿನ ಫೋಟೋಗಳು ಲಭ್ಯವಾಗಿದ್ದು, ಇಬ್ಬರು ಪ್ರೇಮ ವೈಫಲ್ಯದಿಂದ ಮೃತಪಟ್ಟಿರುವುದು ಪೊಲೀಸರಿಗೆ ಖಚಿತವಾಗಿದೆ.
ಯುವತಿಯನ್ನು ಆಕೆಯ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ, ನನ್ನಿಂದ ಆಕೆ ದೂರವಾಗಿದ್ದಾಳೆ ಎಂದು ತಪ್ಪು ಮಾಹಿತಿ ತಿಳಿದ ಯುವಕ, ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ, ತನ್ನ ಪ್ರಿಯಕರ ಸಾವನ್ನಪ್ಪಿದ ಅಂತ ಮನನೊಂದು ಯುವತಿ ಸಾವಿನ ಹಾದಿ ಹಿಡಿದಿದ್ದಾಳೆ. ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ತಮ್ಮ ತಪ್ಪುಗ್ರಹಿಕೆಯಿಂದ ಪ್ರೇಮಿಗಳಿಬ್ಬರ ದುರಂತ ಅಂತ್ಯವಾಗಿದೆ. ಸ್ವಲ್ಪ ತಾಳ್ಮೆ ವಹಿಸಿದ್ದರೆ ಇಬ್ಬರು ಬದುಕಿ ಬಾಳು ಅವಕಾಶ ಇತ್ತು. (ದಿಗ್ವಿಜಯ ನ್ಯೂಸ್)