ವಕ್ಫ್ ಆಸ್ತಿ ದುರ್ಬಳಕೆ; ನ್ಯಾ.ಎನ್.ಆನಂದ್ ವರದಿ ಮರೆ ಮಾಚಿರುವುದೇಕೆ? ಲಹರ್ ಸಿಂಗ್ ಸಿರೋಯಾ ಪ್ರಶ್ನೆ|Misappropriation of waqf property; Why hide Justice N.Anand's report?

Lahar sing siroya
Published on

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಕ್ರಿಮಿನಲ್ ದುರ್ಬಳಕೆ ಮತ್ತು ಅತಿಕ್ರಮಣಗಳ ಕುರಿತ ಉಪ ಲೋಕಾಯುಕ್ತ ನ್ಯಾ.ಎನ್.ಆನಂದ್ ವರದಿಯನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಏಕೆ ಮರೆಮಾಚಿದೆ? (Misappropriation of waqf property; Why hide Justice N.Anand's report?)ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ತನಿಖಾ ಆದೇಶವನ್ನೇ ಏಕೆ ಹಿಂಪಡೆಯಿತು? ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾರನ್ನು ರಕ್ಷಿಸಲು ಯತ್ನಿಸುತ್ತಿದೆ? ಎಂದು ಕೇಳಿದ್ದಾರೆ.

ಕರ್ನಾಟಕದಲ್ಲಿ ವಕ್ಫ್ ಆಸ್ತಿಗಳನ್ನು ರಕ್ಷಿಸಬೇಕಾದ ಕಾನೂನುಬದ್ಧ ಅಧಿಕಾರ ಹೊಂದಿರುವವರೆ ಅನೇಕ ದಶಕಗಳಿಂದ ಆಸ್ತಿ ಕಬಳಿಕೆ, ಒತ್ತುವರಿಯಲ್ಲಿ ತೊಡಗಿದ್ದಾರೆ ಹಾಗೂ ಆಸ್ತಿಗಳ ನಿರ್ವಹಣೆಯನ್ನು ಮಾಡಿಲ್ಲ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ವಕ್ಫ್(ತಿದ್ದುಪಡಿ)ಮಸೂದೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಕರ್ನಾಟಕದ ಮಾಜಿ ಉಪ ಲೋಕಾಯುಕ್ತ ನ್ಯಾ.ಎನ್.ಆನಂದ್ ಸಿದ್ದಪಡಿಸಿದ ವರದಿಯನ್ನು ಉದ್ದೇಶಪೂರ್ವಕವಾಗಿಯೇ ಕಣ್ಮರೆ ಮಾಡಲಾಗಿದೆ. ವಕ್ಫ್ ಆಸ್ತಿಗಳ ನಷ್ಟಕ್ಕೆ, ಅಕ್ರಮಕ್ಕೆ ಮತ್ತು ವೈಯಕ್ತಿಕ ಲಾಭಗಳಿಗೆ ದುರುಪಯೋಗಪಡಿಸಿಕೊಳ್ಳಲು ಮುತವಲ್ಲಿಗಳು/ಸಜ್ಜದ/ವ್ಯವಸ್ಥಾಪಕ ಸಮಿತಿ ಪ್ರಮುಖರು ಮುಖ್ಯ ಕಾರಣರಾಗಿದ್ದಾರೆ. ಒಂದು ಆಸ್ತಿ ಒಮ್ಮೆ ವಕ್ಫ್ ಆಸ್ತಿಯಾದರೆ ಮತ್ತೆ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಕಠಿಣ ಕಾನೂನು ಇವರಿಂದಾಗಿಯೇ ದುರ್ಬಲವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಆಗಿನ ರಾಜ್ಯ ಸರ್ಕಾರ ತನಿಖಾ ಆದೇಶವನ್ನು ಏಕೆ ಹಿಂತೆಗೆದುಕೊಂಡಿತು? ರಾತ್ರೋರಾತ್ರಿ ಈ ತನಿಖಾ ಆಯೋಗವನ್ನು ಏಕೆ ವಿಸರ್ಜಿಸಲಾಯಿತು? ಈ ವರದಿ ಹೊರಬಂದರೆ ಸಿದ್ದರಾಮಯ್ಯ ಅವರ ಸ್ನೇಹಿತರು ಸೇರಿದಂತೆ ಅವರ ಪಕ್ಷದ ನಾಯಕರು, ಕಾಂಗ್ರೆಸ್‌ನ ಕೆಲವು ದೊಡ್ಡ ಹೆಸರುಗಳು ಬಹಿರಂಗವಾಗುತ್ತದೆ ಎಂಬ ಆತಂಕ ಇದ್ದಿರಬಹುದು.

ಇತ್ತೀಚೆಗೆ ಬಡ ರೈತರ ಜಮೀನುಗಳು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಸಿದ್ದರಾಮಯ್ಯ ಸರ್ಕಾರ, ಒತ್ತುವರಿ ತೆರವು ಮಾಡಲು ಪ್ರಯತ್ನಿಸಿರುವುದಾಗಿ ವರದಿಯಾಗಿದೆ. ಆದರೆ ವಕ್ಫ್ ಆಸ್ತಿ ಲೂಟಿ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಒಳಗಿನ ಮತ್ತು ಹೊರಗಿನ ಶ್ರೀಮಂತ ಮತ್ತು ಬಲಶಾಲಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾಂಗ್ರೆಸ್ ಸರ್ಕಾರ ಏಕೆ ಆಸಕ್ತಿ ತೋರುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ ಈ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇದು ವಕ್ಫ್ ಸಂಬಂಧಿತ ಕಾನೂನು ತಿದ್ದುಪಡಿಗಳ ಪರಾಮರ್ಶೆಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net