

ಪಿರಿಯಾಪಟ್ಟಣ: ತಾಲೂಕಿನ ಕಗ್ಗುಂಡಿ ಗ್ರಾಮದ ಶ್ರೀಗುರುಹರಳಯ್ಯ ಮಠದಲ್ಲಿ ಶ್ರೀ ಗುರುಹರಳಯ್ಯ ಟ್ರಸ್ಟ್ ವತಿಯಿಂದ ನಿರ್ಮಿಸುತ್ತಿದ್ದ, ಅಪೂರ್ಣಗೊಂಡಿರುವ ಭವನವನ್ನು ಪೂರ್ಣಗೊಳಿಸಬೇಕು ಹಾಗೂ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನದ ಹಣ ದುರುಪಯೋಗಿಸಿಕೊಂಡಿರುವ ಟ್ರಸ್ಟಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ನೀಡಲು ಶ್ರೀಗುರುಹರಳಯ್ಯ ಮಠ ಹಿತರಕ್ಷಣಾ ಸಮಿತಿ ಹಾಗೂ ತಾಲೂಕು ಮಾದಿಗ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳು ಈ ತೀರ್ಮಾನ ಕೈಗೊಂಡರು.
ತಾಲೂಕು ಮಾದಿಗ ಸಮನ್ವಯ ಸಭಾ ಸಹ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಮಾದಿಗ ಜನಾಂಗ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಸಲುವಾಗಿ ತಾಲೂಕಿನ ಕಗ್ಗುಂಡಿಯಲ್ಲಿದ್ದ ಶ್ರೀಗುರುಹರಳಯ್ಯ ಮಠವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಶ್ರೀ ಗುರುಹರಳಯ್ಯ ಟ್ರಸ್ಟ್ ರಚಿಸಿಕೊಂಡಿದ್ದ ಡಾ.ತಿಮ್ಮಯ್ಯ ಮತ್ತು ಸೀಗೂರು ವಿಜಯಕುಮಾರ್ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ 50 ಲಕ್ಷ ರೂ. ಮಂಜೂರು ಮಾಡಿಸಿಕೊಂಡು ಅದರಲ್ಲಿ 18.20 ಲಕ್ಷ ರೂ.ಗಳನ್ನು ಟ್ರಸ್ಟ್‌ಗೆ ಪಡೆದುಕೊಂಡಿದ್ದರು. ಆದರೆ ಸರ್ಕಾರದ ನಿಯಮಾವಳಿ ಮೀರಿ ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ಭವನ ನಿರ್ಮಿಸಲು ಮುಂದಾಗಿದ್ದಲ್ಲದೆ, ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಮತ್ತು ಎಸಿ 2017 ರಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಈ ವರದಿ ಅನ್ವಯ ಹಿಂದುಳಿದ ವರ್ಗಗಳ ಇಲಾಖೆಯು ಸೂಕ್ತ ತನಿಖೆ ನಡೆಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದು ಈ ಮನವಿ ಆಧಾರದ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ 2019ರಲ್ಲಿ ನಿರ್ದೇಶನಾಲಯ ಇಲಾಖೆಗೆ ಸೂಚಿಸಿದೆ ಎಂದು ತಿಳಿಸಿದರು. ಆದರೆ ಈವರೆಗೂ ಟ್ರಸ್ಟಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ, ಹಣವನ್ನೂ ವಸೂಲಿ ಮಾಡಿಲ್ಲ ಹಾಗೂ ಭವನ ಪೂರ್ಣಗೊಂಡಿಲ್ಲ ಎಂದು ದೂರಿದರು.
ದಲಿತ ಮುಖಂಡ ಆರ್.ಎಸ್.ದೊಡ್ಡಣ್ಣ ಮಾತನಾಡಿ, ಈ ರೀತಿ ಅಕ್ರಮ ನಡೆಸಿರುವುದಕ್ಕೆ ದಾಖಲೆ ಸಹಿತ ತಹಸೀಲ್ದಾರ್ ಮತ್ತು ಎಸಿ ವರದಿ ನೀಡಿದ್ದರೂ ಡಾ.ತಿಮ್ಮಯ್ಯ ಮತ್ತು ವಿಜಯಕುಮಾರ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ನೇರವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಭವನವನ್ನು ಪೂರ್ಣಗೊಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲು ಜಿಲ್ಲಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಸಭೆಯಲ್ಲಿ ಶ್ರೀಗುರು ಹರಳಯ್ಯ ಮಠ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿ.ಜೆ.ಚೆನ್ನಯ್ಯ, ತಾಲೂಕು ಮಾದಿಗ ಸಮನ್ವಯ ಸಮಿತಿ ಗೌರವಾಧ್ಯಕ್ಷ ವಿ.ಕೆ.ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಮಹದೇವ್, ಸಹ ಕಾರ್ಯದರ್ಶಿ ಜಗದೀಶ್, ದೊಡ್ಡಯ್ಯ, ಜಗದೀಶ್ ಭೂತನಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.