ಸತ್ತು ಹೋಗಿದ್ದಾಳೆ ಎನ್ನಲಾದ ಅಮ್ಮ 54 ದಿನಗಳ ಬಳಿಕ ಮತ್ತೆ ಸಿಕ್ಕಳು!; ಮಿರಾಕಲ್ ಬೇಬಿ ಬದುಕಲ್ಲಿ ಮತ್ತೊಂದು ಪವಾಡ

Miracle Baby
Published on

ನವದೆಹಲಿ: ಈ ಮಗು ಬದುಕುಳಿದಿದ್ದೇ ಒಂದು ಪವಾಡ. ಆದರೆ ಈ ಮಗುವಿನ ತಾಯಿ ಸತ್ತು ಹೋಗಿದ್ದಳು ಎಂಬ ಸುದ್ದಿ ಆ ನಂತರ ಬರಸಿಡಿಲಿನಂತೆ ಎರಗಿತ್ತು. ಅದಾಗ್ಯೂ ಈ ಮಗುವಿನ ಬದುಕಿನಲ್ಲಿ ಮತ್ತೊಂದು ಪವಾಡ ಸಂಭವಿಸಿಬಿಟ್ಟಿದೆ. ಸತ್ತು ಹೋಗಿದ್ದಳೆನ್ನಲಾದ ಅಮ್ಮ 54 ದಿನಗಳ ಬಳಿಕ ಪತ್ತೆಯಾಗಿದ್ದು, ಮಗು ಅಮ್ಮನ ಮಡಿಲನ್ನು ಸೇರಿದೆ.

ಇದು ಟರ್ಕಿ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿಯೂ ಜೀವಂತ ರಕ್ಷಿಸಲ್ಪಟ್ಟ ಮಗುವಿನ ಕಥೆ. ಇದೇ ಕಾರಣಕ್ಕೆ ಈ ಮಗುವನ್ನು ಪವಾಡಸದೃಶ ಮಗು (ಮಿರಾಕಲ್ ಬೇಬಿ) ಎಂದು ಕರೆಯಲಾಗುತ್ತಿದೆ. ಫೆಬ್ರವರಿಯಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದೂ ಬದುಕುಳಿದಿದ್ದರಿಂದ ಈ ಮಗುವನ್ನು ಮಿರಾಕಲ್ ಬೇಬಿ ಎಂದು ಕರೆಯಲಾಗಿತ್ತು.

ಆದರೆ ಈ ಮಗುವಿನ ತಾಯಿ ಇದೇ ಭೂಕಂಪದಲ್ಲಿ ಸತ್ತು ಹೋಗಿದ್ದಳು ಎನ್ನಲಾಗಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಮಗು ತನ್ನ ತಾಯಿಯೊಂದಿಗೆ ಸೇರಿಕೊಂಡಿದ್ದು ತಿಳಿದುಬಂದಿದೆ. ಆಕೆ ಇನ್ನೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಟರ್ಕಿ ಸಚಿವರ ಸಲಹೆಗಾರ ಆಂಟನ್​ ಗೆರಶ್ಚಾಂಕೊ ಈ ಕುರಿತು ಟ್ವೀಟ್ ಮಾಡಿದ್ದಾರೆ. ಡಿಎನ್ಎ ಪರೀಕ್ಷೆ ಮೂಲಕ ಈ ತಾಯಿ-ಮಗುವನ್ನು ಖಚಿತಪಡಿಸಿಕೊಂಡು ಜೊತೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net