

ಗಾಜಿಯಾಬಾದ್: ಪ್ರಿಯತಮನ ಜತೆ ಸೇರಿ ಹೆತ್ತ ತಾಯಿಯನ್ನೇ ಚಿತ್ರಹಿಂಸೆ ಕೊಟ್ಟು ಕೊಂದಿರುವ ಘಟನೆ ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಭಾಗದಲ್ಲಿರುವ ಗಾಜಿಯಾಬಾದ್ನ ಬ್ರಿಜ್ ವಿಹಾರದಲ್ಲಿ ನಡೆದಿದೆ. ಪ್ರೇಮಿಗಳ ದಿನದಂದು ಪ್ರಿಯತಮನ ಜತೆ ಇದ್ದ ತನಗೆ ತಾಯಿ ಹೊಡೆದಳೆಂಬ ಸಿಟ್ಟಿನಿಂದಲೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿ ಪ್ರೇಮಿಗಳ ದಿನದಂದು (ಫೆ.14) ತನ್ನ 19 ವರ್ಷದ ಪ್ರಿಯತಮ ಜಿತೇಂದ್ರನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ದೆಹಲಿ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಕೆಯ ತಾಯಿಗೆ ಮಗಳು ತನ್ನ ಪ್ರಿಯತಮನೊಂದಿಗೆ ಮನೆಯಲ್ಲಿರುವ ವಿಚಾರ ತಿಳಿದುಬಂದಿದ್ದು, ಮನೆಗೆ ಬಂದಿರುವ ತಾಯಿ ಸಿಟ್ಟಿನಿಂದ ಮಗಳಿಗೆ ಹೊಡೆದಿದ್ದಾಳೆ. ಕೂಡಲೇ ಅಲ್ಲಿಂದ ಜಿತೇಂದ್ರ ಕಾಲ್ಕಿತ್ತಿದ್ದಾನೆ.
ಮನೆಯ ಹತ್ತಿರವೇ ಇದ್ದ ಜಿತೇಂದ್ರ ಮನೆಗೆ ಹೋಗಿರುವ ಬಾಲಕಿಯ ತಾಯಿ ನಡೆದ ವಿಚಾರವನ್ನು ತಿಳಿಸಿ ಆತ ಮನೆಗೆ ಬಂದ ತಕ್ಷಣ ತಮ್ಮ ಮನೆಗೆ ಕಳುಹಿಸಲು ಹೇಳಿ ಬಂದಿದ್ದಾಳೆ. ಇದರ ನಡುವೆ ಬಾಲಕಿ ಜಿತೇಂದ್ರನೊಂದಿಗೆ ಫೋನಿನಲ್ಲಿ ಮಾತನಾಡಿದ್ದು ತಾಯಿಯ ಕಣ್ಣಿಗೆ ಖಾರದ ಪುಡಿ ಎರಚಲು ಪ್ಲ್ಯಾನ್ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಬಾಲಕಿಯ ಮನೆಗೆ ಬಂದ ಜಿತೇಂದ್ರನಿಗೆ ಬಾಲಕಿಯ ತಾಯಿ ಸಿಟ್ಟಿನಿಂದ ಹೊಡೆದಿದ್ದಾಳೆ. ಅದೇ ಸಮಯಕ್ಕೆ ಆಕೆಯ ಮಗಳು ಅಡುಗೆ ಮನೆಯಿಂದ ಖಾರದ ಪುಡಿ ತಂದು ತಾಯಿಯ ಕಣ್ಣಿಗೆ ಎರಚಿದ್ದಾಳೆ. ಕಣ್ಣು ಕಾಣದಂತಾದ ತಾಯಿ ಅವರಿಬ್ಬರನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಮುಖದ ಮೇಲೆ ಗ್ರ್ಯಾಂಡರ್ನ ಕಲ್ಲನ್ನು ಎಸೆದಿದ್ದಾರೆ. ತಕ್ಷಣ ಕೆಳಕ್ಕೆ ಬಿದ್ದ ಆಕೆಯ ಕುತ್ತಿಗೆಗೆಯನ್ನು ಎಚ್ಚರ ತಪ್ಪುವವರೆಗೂ ಹಗ್ಗದಿಂದ ಬಿಗಿದಿದ್ದಾರೆ.
ತಾಯಿ ಎಚ್ಚರ ತಪ್ಪಿದಳು ಎಂದು ತಿಳಿದ ತಕ್ಷಣ ಮಗಳು ಅಕ್ಕ ಪಕ್ಕದ ಮನೆಯವರಿಗೆ ತಾಯಿ ಎಚ್ಚರ ತಪ್ಪಿ ಬಿದ್ದಿದ್ದಾಳೆ ಎಂದು ಹೇಳಿ ಕರೆತಂದಿದ್ದಾಳೆ. ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಅದಾಗಲೇ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ನಡೆಯುವ ಸಂದಭರ್ದಲ್ಲಿ ಬಾಲಕಿಯ ತಂದೆ ಕೆಲಸದ ನಿಮಿತ್ತ ಬಿಹಾರದಲ್ಲಿದ್ದರು. ವಿಚಾರ ತಿಳಿದು ಮನೆಗೆ ಬಂದ ತಂದೆ ಮಗಳು ಮತ್ತು ಜಿತೇಂದ್ರ ವಿರುದ್ಧ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಇಬ್ಬರೂ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)