ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮೈನರ್ ಡಿಗ್ರಿ ಪ್ರದಾನ

VTU
Published on

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ 2 ಪದವಿ ಪ್ರದಾನ ಮಾಡಲು ನಿರ್ಧರಿಸಿದೆ. ಕೈಗಾರಿಕ ಸಂಸ್ಥೆಗಳ ಸಲಹೆಯನ್ನು ಗಣನೆಗೆ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳನ್ನು ಉದ್ಯೋಗಯೋಗ್ಯರನ್ನಾಗಿಸಲು ಈ ಕೋರ್ಸ್‌ಗಳು ಸಹಕಾರಿಯಾಗಲಿವೆ. ಸಿ++, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಐಒಟಿ, ಡಾಟಾ ಸೈನ್ಸ್, ಕನ್‌ಸ್ಟ್ರಕ್ಷನ್ ಮೆಟೀರಿಯಲ್ ಟೆಕ್ನಾಲಜಿ ಹಾಗೂ ಎನ್ವಿರಾನ್ಮೆಂಟಲ್ ಸ್ಟಡಿಸ್ ಮೈನರ್ ಡಿಗ್ರಿಯಡಿಯಲ್ಲಿ ಅಧ್ಯಯನ ನಡೆಸುವ ವಿಷಯಗಳಾಗಿವೆ.

ಆನ್‌ಲೈನ್‌ನಲ್ಲಿ ತರಗತಿ ಹಾಗೂ ಪರೀಕ್ಷೆಗಳು ನಡೆಯಲಿದ್ದು, ಇಂಜಿನಿಯರಿಂಗ್‌ನ 18 ಕ್ರೆಡಿಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವ ಆಸಕ್ತ ವಿದ್ಯಾರ್ಥಿಗಳು ಮೈನರ್ ಡಿಗ್ರಿ ಕೋರ್ಸ್‌ಗೆ ದಾಖಲಾಗಬಹುದು. ಪ್ರಸಕ್ತ ಸಾಲಿನಲ್ಲಿ 4ನೇ ಸೆಮಿಸ್ಟರ್‌ನಲ್ಲಿದ್ದು, 2024ರ ಫೆಬ್ರವರಿ-ಮಾರ್ಚ್‌ನಲ್ಲಿ 5ನೇ ಸೆಮಿಸ್ಟರ್‌ಗೆ ತೇರ್ಗಡೆಹೊಂದುವ ಬ್ಯಾಚ್ ಈ ಡಿಗ್ರಿಯನ್ನು ಪಡೆಯುವ ಮೊದಲ ಬ್ಯಾಚ್ ಆಗಲಿದೆ.

ವಿವಿಧ ಕ್ಷೇತ್ರದ ತಜ್ಞರ ಸಹಭಾಗಿತ್ವದಲ್ಲಿ ಮೈನರ್ ಡಿಗ್ರಿ ಕೋರ್ಸ್‌ಗಳು ನಡೆಯಲಿದ್ದು, ಹಲವರು ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳಲಿದ್ದಾರೆ ಎಂದು ವಿಟಿಯು ಉಪಕುಲಪತಿ ವಿದ್ಯಾಶಂಕರ್.ಎಸ್ ತಿಳಿಸಿದ್ದಾರೆ. ವಿಟಿಯುನ ಈ ಪ್ರಯತ್ನ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಲಿದೆ. ಪದವಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ ವೃದ್ಧಿಗಾಗಿ ಅಲ್ಪವಧಿ ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಿದ್ದರು. ಆದರೀಗ ಪದವಿ ಜತೆಯಲ್ಲಿಯೇ ಮೈನರ್ ಡಿಗ್ರಿ ಪಡೆದುಕೊಳ್ಳುವ ಮೂಲಕ ಹಣ ಹಾಗೂ ಸಮಯವನ್ನು ಉಳಿಸಿದಂತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net