ಸಚಿವರ ಕಾರ್ಯವೈಖರಿ: ಹೈಕಮಾಂಡ್‌ಗೆ ವರದಿ ಸಲ್ಲಿಸಿದ ಡಾ. ಎಂ.ಸಿ. ಸುಧಾಕರ್: ಏನೇನಿದೆ?

dr. m.c. sudhakara
Published on

ಬೆಂಗಳೂರು ಸಚಿವರ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಎಲ್ಲ ಸಚಿವರ ವರದಿ ಕೇಳಿದ್ದು, ನಾನು ನನ್ನ ವರದಿ ನೀಡಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷದ ಹೈಕಮಾಂಡ್ ನೋಡುತ್ತದೆ. ವರದಿ ಪಡೆದ ಬಳಿಕ ಅವರಿಗೆ ಎಚ್ಚರಿಕೆ ಕೊಡಬೇಕಾ, ಇನ್ನೂ ಹೆಚ್ಚಿನ ಕೆಲಸ ಕೊಡಬೇಕಾ ಅಂತ ಹಿರಿಯರು ತೀರ್ಮಾನ ಮಾಡುತ್ತಾರೆ. ಸಚಿವರ ಕಾರ್ಯವೈಖರಿಯ ವರದಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಕೆಲಸದ ಬಗ್ಗೆ ವರದಿ ತೆಗೆದುಕೊಳ್ಳುವ ಅಧಿಕಾರ ಪಕ್ಷಕ್ಕಿದೆ ಎಂದು ಹೇಳಿದರು.

ನಮ್ಮನ್ನು ಸಚಿವರನ್ನಾಗಿ ಮಾಡಿರುವುದು ಕೇವಲ ಕಾರಲ್ಲಿ ಓಡಾಡಿಕೊಂಡು ಇರೋದಕ್ಕೆ ಅಲ್ಲ. ಪಕ್ಷದ ಪ್ರಣಾಳಿಕೆ ಹಾಗೂ ಜನರಿಗೆ ನಾವು ಕೊಟ್ಟ ಭರವಸೆಯನ್ನು ಈಡೇರಿಸುವುದು ನಮ್ಮ ಆದ್ಯತೆ ಆಗಿರುತ್ತದೆ. ಸರ್ಕಾರದ ಕಾರ್ಯಚಟುವಟಿಕೆಗಳು ಜನರಿಗೆ ತಲುಪಬೇಕು. ಪಕ್ಷದ ಹೆಸರು, ವರ್ಚಸ್ಸು ವೃದ್ಧಿ ಮಾಡಬೇಕು ಎಂಬುವ ಜವಾಬ್ದಾರಿ ಶಾಸಕರು, ಮಂತ್ರಿಗಳ ಮೇಲಿದೆ. ನಾವು ಇದನ್ನ ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ, ಇಲ್ಲವೇ ಅನ್ನುವ ವರದಿ ಪಡೆಯುವ ಜವಾಬ್ದಾರಿ ಅವರದ್ದು ಎಂದು ಹೇಳಿದರು.

ಮಕ್ಕಳ ಭವಿಷ್ಯ ರೂಪಿಸುವ ಕೆಲಸ ನನ್ನ ಮೇಲಿದೆ. ನಾನು ಕಾರ್ಯಕ್ರಮ ರೂಪಿಸಬೇಕು. ಅದು ಬಿಟ್ಟ ಕಾರಲ್ಲಿ ಓಡಾಡಿಕೊಂಡು ಇದ್ದರೆ ಆಗುತ್ತಾ? ಎಂದು ಉನ್ನತ ಶಿಕ್ಷಣ ಸಚಿವರು ಹೈಕಮಾಂಡ್ ನಡೆಯನ್ನು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net