

ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಗೆ ರಾಜ್ಯ ಸರ್ಕಾರದ ಸಚಿವರು ಆಕ್ರೋಶ(Ministers express outrage over BJP's Janakrosha Yatra)ವ್ಯಕ್ತಪಡಿಸಿದ್ದಾರೆ.
ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಅಡುಗೆ ಅನಿಲ ದರ ಏರಿಕೆ ಮಾಡಿದ್ದನ್ನು ನೆಪ ಮಾಡಿಕೊಂಡು ಸಚಿವರು ಬಿಜೆಪಿಯನ್ನು ತೀವ್ರ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿಗರ ಯಾತ್ರೆಯನ್ನು ಹಿಗ್ಗಾಮುಗ್ಗಾ ಹೀಯಾಳಿಸಿದ್ದಾರೆ.
ಕೇಂದ್ರ ಸರ್ಕಾರವು ಅಡುಗೆ ಸಿಲಿಂಡರ್ ದರವನ್ನು 50 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದೇ ಸಂದರ್ಭದಲ್ಲಿ ವಿಪಕ್ಷವಾದ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹಾಸ್ಯಾಸ್ಪದ ರೀತಿಯಲ್ಲಿ ಬೆಲೆ ಏರಿಕೆ ಹೋರಾಟ ಮಾಡುತ್ತಿದೆ. ಬಹು ಮುಖ್ಯವಾಗಿ ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಸಹ ಪೆಟ್ರೋಲ್ ಡೀಸೆಲ್ ಬೆಲೆಯನ್ನು ವಿಪರೀತ ಏರಿಸಿ ಜನರನ್ನು ಲೂಟಿದ್ದ ಮಾಡಿದ ಬಿಜೆಪಿಗರು ತಮ್ಮ ಲೂಟಿಯ ಪ್ರವೃತ್ತಿಯನ್ನು ಇಂದಿಗೂ ನಿಲ್ಲಿಸಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಡಿ.ಮಹದೇವಪ್ಪ ಟೀಕಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಮಾಡಬೇಕಿರುವುದು ಕ್ಷಮೆಯಾಚನೆ ಯಾತ್ರೆ ಹೊರತು ಜನಾಕ್ರೋಶ ಯಾತ್ರೆಯಲ್ಲ, ಏಕೆಂದರೆ ಜನರ ಆಕ್ರೋಶಕ್ಕೆ ಗುರಿಯಾಗಿರುವುದು ಸ್ವತಃ ಬಿಜೆಪಿ. ಬಿಜೆಪಿಯವರು ಈಗ ಎಲ್ಲಿ ಜನಾಕ್ರೋಶ ಪ್ರತಿಭಟನೆ ಕೈಗೊಳ್ಳುತ್ತಾರೆ, ಪ್ರಧಾನಿ ಕಚೇರಿ ಮುಂದೆಯೋ? ಕೇಶವ ಕೃಪಾದ ಎದುರೋ ಅಥವಾ ಜಂತರ್ ಮಂಥರ್‌ನಲ್ಲೋ?
ಮತ್ತೆ 50 ರೂ. ಏರಿಕೆಯಾದ ಅಡುಗೆ ಅನಿಲದ ಬೆಲೆಯನ್ನು, ಮತ್ತೆ ಏರಿಕೆಯಾದ ಟೋಲ್ ಶುಲ್ಕವನ್ನು, ಮತ್ತೆ ಏರಿಕೆಯಾದ ಇಂಧನ ತೈಲಗಳ ಸುಂಕವನ್ನು ಎಲ್ಲಿ ನಿಂತು ಪ್ರಶ್ನಿಸುತ್ತಾರೆ? ಎಂದು ಕೆಣಕಿದ್ದಾರೆ.
ಇನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಕರ್ನಾಟಕ ಬಿಜೆಪಿ ನಾಯಕರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ. ಅಡುಗೆ ಅನಿಲ ದರ, ಪೆಟ್ರೋಲ್, ಡಿಸೇಲ್ ಸುಂಕ ಏರಿಕೆ ಮಾಡಿ ಮೋದಿಯವರೇ
ಮುಟ್ಟಿನೋಡಿಕೊಳ್ಳುವಂತೆ ಶಾಕ್ ಕೊಟ್ಟಿದ್ದಾರೆ. ಪಾಪ, ರಾಜ್ಯ ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆಯನ್ನು ರಾಜ್ಯ ಸರ್ಕಾರದ ವಿರುದ್ಧ ಮಾಡಬೇಕೋ,ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕೋ ಎಂಬ ಗೊಂದಲವಾಗಿದೆ ಎಂದು ಲೇವಡಿ ಮಾಡಿದ್ದಾರೆ.