ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ: DK ಶಿವಕುಮಾರ್

dk (31)
Published on

ಬೆಳಗಾವಿ: ಗಾಂಧಿ ಭಾರತದ ಅಂಗವಾಗಿ ಜ.21ರಂದು ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ನಡೆಯುತ್ತಿದ್ದು, ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಭಾನುವಾರ ಮಾನಾಡಿದರು. ಜ.21ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇಂದು ಮಧ್ಯಾಹ್ನ ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆ ಸ್ಥಳ ಪರಿಶೀಲನೆ ಮಾಡಲಿದ್ದೇನೆ.

ಆಹಾರ ಸಮಿತಿ ಜವಾಬ್ದಾರಿ ಹೊತ್ತಿರುವ ಸಚಿವರಾದ ಕೆ.ಹೆಚ್. ಮುನಿಯಪ್ಪ, ವಸತಿ ಸಮಿತಿ ಮುಖ್ಯಸ್ಥರಾದ ಸುಧಾಕರ್ ಅವರು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದು, ಸ್ವಾಗತ ಸಮಿತಿ ಮುಖ್ಯಸ್ಥರಾದ ಪರಮೇಶ್ವರ್ ಅವರು ಶೀಘ್ರದಲ್ಲೇ ಆಗಮಿಸಲಿದ್ದಾರೆ. ನಾವು ಯಾರಿಗೆಲ್ಲ ಜವಾಬ್ದಾರಿ ವಹಿಸಿದ್ದೇವೋ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

21ಕ್ಕೆ  ಬೆಳಗಾವಿಗೆ ಹೈಕಮಾಂಡ್​​ ಆಗಮನ

21ರ ಬೆಳಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ ಸುವರ್ಣಸೌಧದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ನಂತರ ಔತಣಕೂಟ ಏರ್ಪಡಿಸಲಾಗಿದೆ. ಆನಂತರ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಆಹ್ವಾನ ನೀಡಿದ್ದೇವೆ. ಯಾರು ಬೇಕಾದರೂ ಬರಬಹುದು. ಇಂತಿಷ್ಟೇ ಜನ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಮಾವೇಶ ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರ. ಹೀಗಾಗಿ ಇದು ಎಲ್ಲರ ಕಾರ್ಯಕ್ರಮ. ಬಿಜೆಪಿಯವರು ಹೊರತಾಗಿ ಈ ದೇಶ ಉಳಿಸಲು, ಸಂವಿಧಾನ ರಕ್ಷಿಸಲು, ಗಾಂಧಿಜಿ ಅವರ ಆಚಾರ ವಿಚಾರ ಪ್ರಚಾರ ಮಾಡುವ ಇಚ್ಛೆ ಇರುವ ಯಾರು ಬೇಕಾದರೂ ಸಮಾವೇಶಕ್ಕೆ ಆಗಮಿಸಬಹುದು ಎಂದರು.

ಶೆಟ್ಟರ್ ಬಂದರೆ ಬೆಳಗಾವಿ ಪ್ರವಾಸ ಮಾಡಿಸುವೆ

ಕಾಂಗ್ರೆಸ್ ನವರು ಸರ್ಕಾರದ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಗಾಂಧಿ ಫೋಟೋ ಹಾಕದೇ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರ ಆರೋಪದ ಬಗ್ಗೆ ಮಾತನಾಡಿ, "ಜಗದೀಶ್ ಶೆಟ್ಟರ್ ಅವರು ಬಂದರೆ ಅವರನ್ನು ಬೆಳಗಾವಿ ಪ್ರವಾಸ ಮಾಡಿಸುತ್ತೇನೆ. ನಾವು ಎಲ್ಲೆಲ್ಲಿ ಏನು ಮಾಡಿದ್ದೇವೆ ಎಂದು ಅವರಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಆಡಿದ ನುಡಿಮುತ್ತುಗಳನ್ನು ನೋಡಲಿ" ಎಂದು ತಿಳಿಸಿದರು.

ಕುಂಭಮೇಳಕ್ಕೆ ಹೋಗಬೇಕೆಂದುಕೊಂಡಿದ್ದೇನೆ

ಬೆಳಗಾವಿಯ ಕಪಿಲೇಶ್ವರನ ದರ್ಶನ ಮಾಡಿದ ಬಳಿಕ ಮಾತನಾಡಿದ ಅವರು, "ನಾನು ಈ ಬಾರಿ ಕುಟುಂಬ ಸಮೇತರಾಗಿ ಕುಂಭಮೇಳಕ್ಕೆ ಹೋಗಬೇಕು ಎಂದು ಕೊಂಡಿರುವೆ. ಅಲ್ಲಿನ ಸರ್ಕಾರದವರು ಆಹ್ವಾನ ನೀಡಿದ್ದಾರೆ. ಇನ್ನೂ ಹೋಗುವ ದಿನಾಂಕ ನಿಗದಿಯಾಗಿಲ್ಲ. ದೇವರ ಮೇಲೆ ಒಬ್ಬೊಬ್ಬರ ನಂಬಿಕೆ. ಪರಮೇಶ್ವರ ಅವತಾರ ಕಪಿಲೇಶ್ವೇರ.

ಇಲ್ಲಿಗೆ ಮಹಾತ್ಮ ಗಾಂಧಿ ಅವರು, ಬಾಲ ಗಂಗಾಧರ ತಿಲಕ್ ಅವರು, ಸ್ವಾಮಿ ವಿವೇಕಾನಂದರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಉಳಿಯಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ರುದ್ರೇಶ್ವರನ ಪೂಜೆ ಮಾಡಿದ್ದೇವೆ. ಈ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇವೆ. ಕಾರ್ಯಕ್ರಮ ಯಶಸ್ವಿಯಾಗಲಿ, ರಾಜ್ಯಕ್ಕೂ, ನಿಮಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net