ಕೇಂದ್ರ ಸಚಿವ HDK ಕುರಿತು ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚಿಸಿದ ಸಚಿವ Zameer Ahmed

HDK Zameer
Published on

ಮೈಸೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಕರಿಯಣ್ಣ ಎಂದು ಕರೆದಿದ್ದ ಸಚಿವ ಜಮೀರ್ ಅಹ್ಮದ್​ (Zameer Ahmed) ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಜಮೀರ್​, ನನ್ನ ಮಾತಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ನಾನು ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದದ್ದು ಇದೇ ಮೊದಲೇನಲ್ಲ. ಪ್ರೀತಿಯಿಂದ ಅವರನ್ನು ಹಾಗೇ ಹಲವು ಸಲ ಕರೆದಿದ್ದೇನೆ. ಅವರೂ ನನ್ನನ್ನು ಕುಳ್ಳ ಎಂದು ಕರೆದಿದ್ದಾರೆ. ಆದರೆ ಚುನಾವಣೆ ಕಾರಣಕ್ಕೆ ಇದನ್ನು ವಿವಾದ ಮಾಡಲಾಗುತ್ತಿದೆ. ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ.

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮೇಲೆ ಅವರ ಹೇಳಿಕೆ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಜಮೀರ್​, ಅದು ಏಕೆ ಪರಿಣಾಮ ಬೀರುತ್ತದೆ? ನಾನು ಮೊದಲ ಬಾರಿಗೆ ಹಾಗೆ ಕರೆದಿಲ್ಲ. ಕುಮಾರಸ್ವಾಮಿ ಮತ್ತು ನಾನು ಆಪ್ತರಾಗಿದ್ದಾಗ ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.

ದೇವೇಗೌಡರನ್ನು ಕೊಂಡುಕೊಳ್ಳುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ದೇವೇಗೌಡರ ಮೇಲೆ ಅಪಾರ ಗೌರವ ಇದೆ. ಈ ಹಿಂದೆ ಚುನಾವಣೆಯಲ್ಲಿ ಕುಮಾರಸ್ವಾಮಿ, ನನಗೆ ಮುಸ್ಲಿಮರ ಮತಗಳು ಬೇಡ ಎಂದಿದ್ದರು. ಈಗ ದುಡ್ಡು ಕೊಟ್ಟು ಮತ ಖರೀದಿಗೆ ಮುಂದಾಗಿದ್ದಾರೆ. ಅದನ್ನು ಉಲ್ಲೇಖಿಸಿ ನಾನು ಹಾಗೆ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net