

ಬೆಂಗಳೂರು: ಕರೊನಾ ಮಹಾಮಾರಿ ಜನರನ್ನು ಕಂಗೆಡಿಸಿರುವುದು ಮಾತ್ರವಲ್ಲದೇ, ಸರ್ಕಾರಗಳನ್ನೂ ಚಿಂತೆಗೀಡುಮಾಡಿಬಿಟ್ಟಿದೆ. ಸದ್ದಿಲ್ಲದೇ ಅದ್ಯಾವುದೋ ಮಾಯೆಯಲ್ಲಿ ದೇಹದೊಳಕ್ಕೆ ನುಸುಳುತ್ತಿರುವ ಈ ವೈರಸ್ ಅನ್ನು ಹೇಗೆ ಓಡಿಸುವುದು ಎಂಬುದೇ ಚಿಂತೆಯಾಗಿದೆ.
ಇದೀಗ ವೈದ್ಯಕೀಯ ಸಚಿವ ಡಾ.ಸುಧಾಕರ್ ಕೆ. ಅವರ ನಿದ್ದೆಯನ್ನು ಈ ವೈರಸ್ ಕೆಡಿಸಿದೆ. ಅದಕ್ಕೆ ಕಾರಣ ಮಹಾರಾಷ್ಟ್ರದಿಂದ 250 ಜನರು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವುದು!
ಹೌದು. ಇದಾಗಲೇ ಮಹಾರಾಷ್ಟ್ರದಿಂದ ಬಂದ ನೂರಾರು ಮಂದಿ ಕರ್ನಾಟಕದೊಳಗೆ ವೈರಸ್ ಅನ್ನು ಅತಿ ವೇಗದಲ್ಲಿ ಹರಡಿಸುತ್ತಿದ್ದಾರೆ. ಮಂಡ್ಯ, ಬೀದರ್ ಸೇರಿದಂತೆ ಕೆಲವು ಜಿಲ್ಲೆಗಳು ಮಹಾರಾಷ್ಟ್ರದಿಂದ ಬಂದವರಿಂದಾಗಿಯೇ ಅಕ್ಷರಶಃ ನಲುಗಿ ಹೋಗಿದೆ. ಇದೀಗ ಚಿಕ್ಕಬಳ್ಳಾಪುರಕ್ಕೆ ಅವರನ್ನು ಕರೆ ತರುತ್ತಿರುವುದು ಸಚಿವ ಸುಧಾಕರ್ ಅವರ ನಿದ್ದೆಯನ್ನೂ ಹಾಳುಮಾಡಿದೆಯಂತೆ.
ಈ ಕುರಿತು ಆತಂಕ ವ್ಯಕ್ತಪಡಿಸಿ ಅವರು ಟ್ವೀಟ್ ಮಾಡಿದ್ದಾರೆ. ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ ಸುಮಾರು 250 ಜನರನ್ನು 6 ಬಸ್ಸುಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿರುವುದು ದುರದೃಷ್ಟಕರ ಹಾಗೂ ದುಡುಕಿನ ನಿರ್ಧಾರ. ಹೊರರಾಜ್ಯದ ಪ್ರಯಾಣಿಕರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ ಹಾಗೂ ದುಗುಡದಿಂದ ನಿದ್ದೆ ಬರುತ್ತಿಲ್ಲ. ಎಲ್ಲಾ ಜಿಲ್ಲಾಡಳಿತಗಳು ಎಚ್ಚರವಹಿಸಬೇಕು ಎಂದು ಅವರು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಟ್ವೀಟ್ ಮಾಡಿರುವುದು ಅವರು ನಿನ್ನೆ ರಾತ್ರಿ. ಇಂದು ಬೆಳಗ್ಗೆ ಇನ್ನೊಂದು ಟ್ವೀಟ್ ಮಾಡಿರುವ ಅವರು, ನಾನು ಈಗಾಗಲೇ ಮಖ್ಯ ಕಾರ್ಯದರ್ಶಿಯವರ ಜತೆ ಮಾತಾಡಿದ್ದೇನಿ. ಎರಡು ದಿನಗಳಿಂದ ನಮ್ಮ ಗಡಿಗೆ ಬಂದು ಕಾಯುತ್ತಿದ್ದರು. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬಿಡಬೇಕಾಯಿತು ಎಂದು ಸಮಜಾಯಷಿ ಕೊಟ್ಟರು. ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತೇವೆ ಹಾಗೂ ಎಲ್ಲರಿಗೂ ಪರೀಕ್ಷೆಯನ್ನು ಮಾಡುತ್ತೇವೆ. ಆಯಾ ಜಿಲ್ಲೆಯ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಅದರಲ್ಲಿ ಬರೆದು ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.
ಸಮಜಾಯಿಷಿ ಏನೇ ಇದ್ದರೂ, ಅವರು ನಿನ್ನೆ ರಾತ್ರಿ ಮಾಡಿರುವ ಟ್ವೀಟ್ನಿಂದ ಅವರು ಎಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವುದು ತಿಳಿಯುತ್ತದೆ.