

ಬೆಂಗಳೂರು: ಮಾಜಿ ಸಚಿವ ಶಂಕರ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಅವರು ರಾಜಕೀಯ ಮರು ಹುಟ್ಟು ಬಯಸಿದ್ದು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದಾರೆ. ಈ ಮೂಲಕ ಟಿಕೆಟ್ ರೇಸ್ನಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿದೆ. ಮಾಜಿ ಸಂಸದೆಯೂ ಆಗಿರುವ ತೇಜಸ್ವಿನಿಗೌಡ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಯಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರಲ್ಲಿ ನಿವೇದಿಸಿಕೊಂಡಿದ್ದಾರೆ. ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರನ್ನೂ ಕೋರಿದ್ದಾರೆ. ತಾವು ಈ ಹಿಂದೇ ಈ ಕ್ಷೇತ್ರ ವ್ಯಾಪ್ತಿಯ ಸಂಸದೆಯಾಗಿದ್ದು, ಕ್ಷೇತ್ರದೊಂದಿಗೆ ನಿಕಟತೆ ಇದೆ. ಜನರಿಗೂ ಪರಿಚಿತಳು. ಸ್ಪರ್ಧೆ ನಡೆಸಲು ಅವಕಾಶ ನೀಡಿದರೆ ಪೈಪೋಟಿ ನೀಡಿ ಕಾಂಗ್ರೆಸ್‌ನ ಒಂದು ಕಾಲದ ಭದ್ರಕೋಟೆಯನ್ನು ಮರು ವಶ ಮಾಡಿಕೊಡಲು ಸಮರ್ಥಳು ಎಂದು ವಿವರಿಸಿದ್ದಾರೆ. ವಿಜಯವಾಣಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದು ಅವಕಾಶ ನೀಡಿದರೆ ಸ್ಪರ್ಧಿಸುವೆ. ನಾನು ಪ್ರಬಲ ಹಾಗೂ ಸಮರ್ಥಳು ಎಂದುಕೊಂಡಿದ್ದೇನೆ ಎಂದರು. ಇನ್ನು ಶಿಗ್ಗಾವ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಆರ್.ಶಂಕರ್ ಪ್ರಯತ್ನ ಆರಂಭಿಸಿದ್ದಾರೆ. ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋತಿದ್ದ ಅವರು ಇದೀಗ ಶಿಗ್ಗಾವ್ ಮೇಲೆ ಕಣ್ಣಿಟ್ಟಿದ್ದಾರೆ. ಗುರುವಾರ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಶಿಗ್ಗಾವ್ ಕ್ಷೇತ್ರಕ್ಕೆ ಸಂಬಂಧಿಸಿದ ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಮಾಲೋಚನೆಯೂ ನಡೆಯಿತು. ಐದು ಆಕಾಂಕ್ಷಿಗಳನ್ನು ಕರೆಸಿ ಒಟ್ಟಾಗಿ ಕೆಲಸ ಮಾಡುವಂತೆ ಹಾಗೂ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವಂತೆ ಸೂಚನೆ ನೀಡಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಹಾವೇರಿ ಜಿಲ್ಲೆಯ ಪ್ರಮುಖ ನಾಯಕರಿದ್ದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿ ಅಗತ್ಯವಿದೆ. ನಾನು ಸಮರ್ಥಳು ಹಾಗೂ ಪ್ರಬಲ ಎಂದು ಭಾವಿಸಿದ್ದೇನೆ. ಅಲ್ಲದೇ ಈ ಹಿಂದೆ ಈ ಕ್ಷೇತ್ರ ವ್ಯಾಪ್ತಿಯ ಲೋಕಸಭೆ ಕ್ಷೇತ್ರದಿಂದ ಆರಿಸಿಬಂದಿದ್ದೆ. - ತೇಜಸ್ವಿಸಿ ಗೌಡ, ಮಾಜಿ ಸಂಸದೆ