

ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿತರಾಗಿ ಲಾಬಿ ನಡೆಸುತ್ತಿದ್ದವರೆಲ್ಲರ ಚಿತ್ತ ಈಗ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಭೇಟಿಯತ್ತ ನೆಟ್ಟಿದೆ. ಈಗಿನ ಮಾಹಿತಿ ಪ್ರಕಾರ, ಈ ಭೇಟಿ ಸಂದರ್ಭ ದಲ್ಲಿಯೂ ಮಾತುಕತೆ ನಡೆಯುವುದಕ್ಕೆ ಸಮಯದ ಕೊರತೆ ಇದೆ!
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಪುಟ ವಿಸ್ತರಣೆ ಬಗೆಗಿನ ಚರ್ಚೆಗಳಿಗೆ ಅಲ್ಪ ವಿರಾಮ ಬಿದ್ದಿದ್ದು, ಇನ್ನೇನಿದ್ದರೂ ಅಮಿತ್ ಷಾ ಕಾರ್ಯಕ್ರಮದ ಬಳಿಕವಷ್ಟೆ ಸ್ಪಷ್ಟ ರೂಪ ಪಡೆಯುವ ಸಾಧ್ಯತೆಗಳಿವೆ. ದೆಹಲಿಯಿಂದ ಹಿಂದಿನ ದಿನವೇ ಬರಬೇಕಿದ್ದ ಕಾರ್ಯಕ್ರಮದಲ್ಲಿ ಬದಲಾವಣೆ ಆಗಿದ್ದು, ಒಂದು ದಿನದ ಭೇಟಿಗೆ ಸೀಮಿತವಾಗಿದೆ. ಬೆಳಿಗ್ಗೆ ದೆಹಲಿಯಿಂದ ಬಂದ ಬಳಿಕ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ಹುಬ್ಬಳ್ಳಿಗೆ ಹೆಲಿಕ್ಯಾಪ್ಟರ್ನಲ್ಲಿ ಸಿಎಂ ಜತೆ ತೆರಳಲಿದ್ದಾರೆ. ಅಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಅಂದೇ ದೆಹಲಿಗೆ ವಾಪಸ್ ಆಗಲಿದ್ದಾರೆ. ಒಂದು ದಿನ ಮೊದಲೇ ಅಮಿತ್ ಷಾ ಬಂದಿದ್ದರೆ, ಸಿಎಂ ಜತೆ ಮಾತನಾಡಲು ಸಮಯ ಸಿಗುತಿತ್ತು. ಕಾರ್ಯಕ್ರಮ ಬದಲಾಗಿರುವ ಕಾರಣ ಹುಬ್ಬಳ್ಳಿಗೆ ಜತೆಯಲ್ಲಿ ಪ್ರಯಾಣ ಮಾಡುವಾಗ ಮಾತ್ರ ಸಂಪುಟ ಚರ್ಚೆಗೆ ಅವಕಾಶ ಸಿಗಲಿದೆ. ಆ ಹೊತ್ತಿನಲ್ಲಿ ಷಾ ಮಾತುಕತೆಗೆ ಒಲವು ತೋರಿಸುವರೋ ಅಥವಾ ದಾವೋಸ್ ಪ್ರಯಾಣದ ಬಳಿಕ ದೆಹಲಿಗೆ ಬನ್ನಿ ಎಂದು ಸಂದೇಶ ನೀಡುವರೋ ಎಂಬುದನ್ನು ಕಾದು ನೋಡಬೇಕು. ಸಂಪುಟ ಬಗ್ಗೆ ಈಗ ಚರ್ಚೆ ಮಾಡಲು ಷಾ ಆಸಕ್ತಿ ತೋರಿಸುವ ಸಾಧ್ಯಗಳಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ದಾವೋಸ್ ಪ್ರವಾಸದೊಳಗಾಗಿ ಸಂಪುಟ ವಿಸ್ತರಣೆ ಮಾಡಲೇಬೇಕೆನ್ನುವ ಸಿಎಂ ಹೆಬ್ಬಯಕೆ ಈಡೇರುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.