ಹೊಸಕೋಟೆ ಏತನೀರಾವರಿ ಯೋಜನೆಗೆ ಗಡುವು ವಿಧಿಸಿದ ಸಚಿವ

Hosakote LI meeting
Published on

ಬೆಂಗಳೂರು: ಕೆರೆಗಳಿಗೆ ಸಂಸ್ಕರಿಸಿದ ನೀರು ಭರ್ತಿ ಮೂಲಕ ನೀರಿನ ದಾಹ ಕೊನೆಗಾಣಿಸಲು ಉದ್ದೇಶಿತ ಹೊಸಕೋಟೆ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಅ.31ರ ಗಡುವು ವಿಧಿಸಲಾಗಿದೆ. ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ತಾಕೀತು ಮಾಡಿದರು.

ವಿಕಾಸಸೌಧದಲ್ಲಿ ಶನಿವಾರ ಕರೆದಿದ್ದ ಜಂಟಿ ಸಭೆಯಲ್ಲಿ ಸಣ್ಣ ನೀರಾವರಿ ಜತೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಧ್ಯಕ್ಷತೆವಹಿಸಿದ್ದ ಎನ್.ಎಸ್.ಬೋಸರಾಜು ಮಾತನಾಡಿ 43 ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬುವ ಹೊಸಕೋಟೆ ಏತ ನೀರಾವರಿ ಯೋಜನೆಯನ್ನು 2022ರ ಸೆಪ್ಟೆಂಬರ್‌ಗೆ ಪೂರ್ಣಗೊಳಿಸುವ ಷರತ್ತು ವಿಧಿಸಿ ಟೆಂಡರ್ ನೀಡಲಾಗಿತ್ತು.

ಆದರೆ ಕಾಲಮಿತಿ ದಾಟಿ 10 ತಿಂಗಳಾಗಿದ್ದರೂ ಪೂರ್ಣಗೊಂಡಿಲ್ಲ. ಕಾಲ ಕಾಲಕ್ಕೆ ಕಾಮಗಾರಿ ಪ್ರಗತಿ ಪರಿಶೀಲಿಸಿ ವೇಗ ಕಡಿಮೆಯಾದಾಗ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವುದು ಅಧಿಕಾರಿಗಳ ಕರ್ತವ್ಯ. ಈ ವಿಷಯದಲ್ಲಿ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಮಸ್ಯೆಗಳಿದ್ದರೆ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.

ಯೋಜನೆಯಡಿ ಎರಡು ಕಿ.ಮೀ. ಉದ್ದದ ಕೊಳವೆ ಮಾರ್ಗ ಪ್ರಾರಂಭಿಸಲು ಇರುವ ಅಡೆತಡೆಗಳ ಬಗ್ಗೆ ಎನ್.ಎಸ್.ಬೋಸರಾಜು ಮಾಹಿತಿ ಪಡೆದರು. ಕಾಮಗಾರಿ ಸುಗಮವಾಗಿ ಸಾಗಿಸಲು ಬೇಕಾದ ಕ್ರಮಗಳನ್ನು ಪ್ರಾಧಿಕಾರದಿಂದ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿದ್ದ ಎನ್‌ಎಚ್‌ಎಐ ಅಧಿಕಾರಿಗಳು ಸಮಜಾಯಿಷಿ ನೀಡಿ, ಸೋಮವಾರದಿಂದಲೇ ಕಾಮಗಾರಿ ಶುರು ಮಾಡಬಹುದು ಎಂದು ತಿಳಿಸಿದರು.

ಅಡೆತಡೆ ನಿವಾರಣೆಯಾಗಿರುವ ಕಾರಣ ಅ.31ರ ಗಡುವು ಮೀರುವಂತಿಲ್ಲ. ಹೆಬ್ಬಾಳ-ನಾಗವಾರ ವ್ಯಾಲಿ ಯೋಜನೆಯ ಬಾಕಿ ವೇಗ ಹೆಚ್ಚಿಸಿಕೊಳ್ಳಬೇಕು. ಸೆಪ್ಟೆಂಬರ್ 15ರೊಳಗೆ ಮತ್ತೊಮ್ಮೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವೆ ಎಂದು ಅಧಿಕಾರಿಗಳಿಗೆ ಎನ್.ಎಸ್.ಬೋಸರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net