

ಬೆಂಗಳೂರು: ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಿದರೆ ಬೆಳಗಾವಿ ಮಹಾನಗರ ಪಾಲಿಕೆ ವಿಸರ್ಜನೆ ಮಾಡಿಸುವೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬೆದರಿಕೆ ಹಾಕಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪಾಲಿಕೆ ಮಹಾಪೌರರಾದ ಶೋಭಾ ಪಾಯಪ್ಪಾ ಸೋಮನಾಚೆ ಆರೋಪಿಸಿದ್ದಾರೆ.
ರಾಜ್ಯಪಾಲರಿಗೆ ಈ ಕುರಿತು ಪತ್ರ ಬರೆದು ದೂರಿದ್ದಾರೆ. ಅಲ್ಲದೆ, ಪಾಲಿಕೆ 37 ಸದಸ್ಯರೊಂದಿಗೆ ಭೇಟಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ. ಸಚಿವರ ಹಸ್ತಕ್ಷೇಪ, ಇನ್ನೂ ಕೆಲವು ಪ್ರಮುಖ ಘಟನೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿನಂತಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಕರ್ತವ್ಯ ಲೋಪಗಳ ಬಗ್ಗೆ ಪಾಲಿಕೆ ಸದಸ್ಯರು ಗೊತ್ತುವಳಿಯನ್ನು ಮಂಡಿಸಿ, ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರಾಜ್ಯಪಾಲರು, ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ನಿಯಮಾನುಸಾರ ಶಿಾರಸು ಮಾಡಲಾಗಿದೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಿದರೆ ಪಾಲಿಕೆಯನ್ನೇ ವಿಸರ್ಜನೆ ಮಾಡಿಸುವೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಪಾಲಿಕೆ ಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ.
ಸಚಿವರ ಹಸ್ತಕ್ಷೇಪ, ಒತ್ತಡ, ಕಿರುಕುಳದಿಂದ ಮಹಿಳೆಯಾದ ನನಗೆ ಸುಗಮ, ಸ್ವತಂತ್ರ ಹಾಗೂ ನಿರ್ಭೀತಿ, ನಿಷ್ಪಕ್ಷಪಾತವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ.
ಸಚಿವರ ಹೇಳಿಕೆಯಿಂದ ಬೆಳಗಾವಿಯ ಆರು ಲಕ್ಷ ಜನರು ಭಯಭೀತರಾಗಿದ್ದಾರೆ. ಪಾಲಿಕೆಯ 58 ನಗರ ಸೇವಕರನ್ನು ಅತಂತ್ರ ಮಾಡುವ ದುರುದ್ದೇಶವನ್ನು ಸಚಿವರು ಹೊಂದಿದ್ದಾರೆ ಎಂದು ಶೋಭಾ ಪಾಯಪ್ಪಾ ಸೋಮನಾಚೆ ದೂರಿನಲ್ಲಿ ವಿವರಿಸಿದ್ದಾರೆ.