ಸಚಿವ ಸಂತೋಷ್ ಲಾಡ್ ಹೇಳಿಕೆ ಖಂಡನೀಯ

Published on

ಪಿರಿಯಾಪಟ್ಟಣ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರಧಾನಿ ಮೋದಿ ಬದಲಿಸಿ ದೇಶ ಉಳಿಸಿ ಎಂಬ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಜೈರಾಮ್‌ಗೌಡ ಆಗ್ರಹಿಸಿದ್ದಾರೆ.

ಎನ್‌ಡಿಎ ಸರ್ಕಾರಕ್ಕೆ ರಾಷ್ಟ್ರದ ಮತದಾರರು ಸತತ ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ದೇಶದ ಆರ್ಥಿಕತೆ ಅಭಿವೃದ್ಧಿಯಾಗಿದ್ದು ವಿಶ್ವದ ಮೂರನೇ ಅಭಿವೃದ್ಧಿ ರಾಷ್ಟ್ರವಾಗುವತ್ತ ಭಾರತ ಮುನ್ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು 25 ಕೋಟಿ ರೂ.ಗೂ ಹೆಚ್ಚು ಬಡವರು ಬಡತನ ರೇಖೆ ದಾಟಿ ಉತ್ತಮ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಗರೀಬಿ ಹಠಾವೋ ಎಂಬ ಘೋಷವಾಕ್ಯವನ್ನು ಕಾಂಗ್ರೆಸ್ ಕಳೆದ 60 ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದಿರುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ದೇಶದ ಮೂಲ ಸೌಕರ್ಯಗಳಿರಬಹುದು, ಆತ್ಮ ನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂದಿನ ಸ್ಟಾರ್ಟ್‌ಅಪ್‌ಗಳ ಸಂಖ್ಯೆ, ಬಾಹ್ಯಾಕಾಶ ಕ್ಷೇತ್ರದ ಸಾಧನೆ, ರಕ್ಷಣಾ ಕ್ಷೇತ್ರದ ಸಾಧನೆ, ದೇಶದ ಇಂದಿನ ಮಿಲಿಟರಿ ಶಕ್ತಿ, ರಕ್ಷಣಾ ಕ್ಷೇತ್ರದ ಉತ್ಪಾದನೆಯಲ್ಲಿ ಹೆಚ್ಚಿದ ರಫ್ತಿನ ಪ್ರಮಾಣ, ದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ವ್ಯಾಪಕ ಬದಲಾವಣೆ, ದೇಶದ ಈಗಿನ ಐಐಟಿಗಳ ಸಂಖ್ಯೆ, ದೇಶದ ಈಗಿನ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಇವೆಲ್ಲವೂ ನರೇಂದ್ರ ಮೋದಿ ಅವರ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net