

ಸರಗೂರು: ತಾಲೂಕಿನ ಚಿಕ್ಕದೇವಮ್ಮ ಬೆಟ್ಟಕ್ಕೆ ಸಹಕಾರ ಸಚಿವ ಎನ್.ಕೆ.ರಾಜಣ್ಣ ಅವರ ಮಗಳು ರಶ್ಮಿ ಮತ್ತು ಸೊಸೆ ಭಾವನಾ ಹಾಗೂ ಕುಟುಂಬದವರು ಗುರುವಾರ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ಸಹಕಾರ ಸಚಿವ ಎನ್.ಕೆ.ರಾಜಣ್ಣ ಅವರು ನಮ್ಮ ತಾಲೂಕಿನ ನಾಡದೇವಿ ಚಿಕ್ಕದೇವಮ್ಮ ಬೆಟ್ಟಕ್ಕೆ ಭೇಟಿ ನೀಡಿದ್ದು, ಬೆಟ್ಟಕ್ಕೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಕ್ಷೇತ್ರದ ಶಾಸಕರು ಹಗಲು ಇರುಳು ಶ್ರಮಪಡುತ್ತಿದ್ದಾರೆ. ವನಜಲಸಿರಿ ನಾಡು ಎಂದು ಪ್ರಸಿದ್ಧವಾಗಿರುವ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಸಚಿವ ರಾಜಣ್ಣ ಅವರ ಮುಖೇನ ನಮ್ಮ ತಾಲೂಕಿನ ಸಹಕಾರ ಸಂಘಗಳಿಗೆ ಅನುದಾನವನ್ನು ನೀಡಿದರೆ ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಸಚಿವರ ಪುತ್ರಿ ರಶ್ಮಿ ಅವರನ್ನು ಕೋರಿದರು.
ಎನ್.ಕೆ.ರಾಜಣ್ಣ ಅವರ ಪುತ್ರಿ ರಶ್ಮಿ ಮಾತನಾಡಿ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆ ಮಾಡಿಸಲು ಬಂದಿದ್ದೆವು. ತಾಲೂಕಿನ ಕಬಿನಿ ಮತ್ತು ನುಗು ಜಲಾಶಯದ ನೋಡಲು ಬಂದು, ಚಿಕ್ಕದೇವಮ್ಮ ಬೆಟ್ಟಕ್ಕೂ ಭೇಟಿ ಕೊಟ್ಟಿದ್ದೇವೆ. ತಾಲೂಕಿನ ಶಾಸಕ ಅನಿಲ್ ಚಿಕ್ಕಮಾದು ಅವರು ಉತ್ತಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೆಟ್ಟದಲ್ಲಿ ದೇವಸ್ಥಾನ ಹಾಗೂ ಬೆಟ್ಟಕ್ಕೆ ಹೋಗಲು ರಸ್ತೆಯನ್ನು ಚೆನ್ನಾಗಿ ಮಾಡಿಸಿದ್ದಾರೆ ಎಂದು ತಿಳಿಸಿದರು.
ಪಪಂ ಸದಸ್ಯ ಶ್ರೀನಿವಾಸ, ಮಾಜಿ ಜಿಪಂ ಸದಸ್ಯ ಪುರದಕಟ್ಟೆ ಬಸವರಾಜು, ತಾಲೂಕು ಪಂಚಾಯಿತಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ಚನ್ನಮಲ್ಲಪ್ಪ, ರಸ್ತೆಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹದೇವ, ತಹಸೀಲ್ದಾರ್ ಮೋಹನಕುಮಾರಿ, ಪೋಲಿಸ್ ಠಾಣೆ ಉಪ ನಿರೀಕ್ಷಕ ಆರ್.ಕಿರಣ್, ಆರ್‌ಐ ರವಿಚಂದ್ರನ್, ವಿಎ ಕುಮಾರ್, ಪಾರುಪತ್ತೇದಾರ ಮಹದೇವಸ್ವಾಮಿ, ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.