

ಬೆಂಗಳೂರು: ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್‌ನಂತಹ ಕ್ಷೇತ್ರಗಳಲ್ಲಿ ಉದ್ಯಮಗಳಿಗೆ ಬೇಕಾದ ಕೌಶಲ್ಯದೊಂದಿಗೆ ಯುವ ಸಮೂಹವನ್ನು ಸಜ್ಜುಗೊಳಿಸಲು ಉದ್ದೇಶಿತ ‘ನಿಪುಣ ಕರ್ನಾಟಕ’ ಕಾರ್ಯಕ್ರಮವನ್ನು ಬಳಸಿಕೊಳ್ಳಲು ಕಾಂಗ್ಸ್‌ಬರ್ಗ್ ಡಿಜಿಟಲ್ ಕಂಪನಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಹ್ವಾನಿಸಿದರು.
ಕಂಪನಿ ಅಧ್ಯಕ್ಷ ಮತ್ತು ಸಿಇಒ ಶೇನ್ ಮೆಕ್‌ಆರ್ಡಲ್ ಮತ್ತು ಕಾಂಗ್ಸ್‌ಬರ್ಗ್ ಡಿಜಿಟಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಮಂಗಳವಾರ ಭೇಟಿಯಾದ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಈ ಆಹ್ವಾನ ಕೊಟ್ಟರು.
‘ನಿಪುಣ ಕರ್ನಾಟಕ’ ಸಾಮಾನ್ಯ ತರಬೇತಿ ಕಾರ್ಯಕ್ರಮವಲ್ಲ. ನಿರ್ದಿಷ್ಟ ಉದ್ಯಮದ ಅವಶ್ಯಕತೆ ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಉದ್ಯೋಗಿಗಳ ಬೇಡಿಕೆಗಳನ್ನು ಪೂರೈಸಲು ಕಾಂಗ್ಸ್‌ಬರ್ಗ್ ಡಿಜಿಟಲ್‌ನಂತಹ ಕಂಪನಿಗಳೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ ಎಂದರು.
ಆವಿಷ್ಕಾರ ಮತ್ತು ಪ್ರತಿಭೆಗಳ ಅಭಿವೃದ್ಧಿಯಲ್ಲಿ ನಾರ್ವೆಯೊಂದಿಗೆ ಪಾಲುದಾರಿಕೆಗೆ ರಾಜ್ಯ ಮುಕ್ತ ಮನಸ್ಸು ಹೊಂದಿದೆ. ಜಾಗತಿಕ ಗುಣಮಟ್ಟವನ್ನು ಪೂರೈಸಲು ಕರ್ನಾಟಕದ ಅತ್ಯುನ್ನತ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಕೋರಿದರು.
ಕಾಂಗ್ಸ್‌ಬರ್ಗ್ ಡಿಜಿಟಲ್‌ನ ಅಧ್ಯಕ್ಷ ಮತ್ತು ಸಿಇಒ ಶೇನ್‌ಮೆಕ್‌ಆರ್ಡಲ್ ಮಾತನಾಡಿ, ಕೈಗಾರಿಕಾ ದತ್ತಾಂಶ ಮತ್ತು ತಂತ್ರಜ್ಞಾನದಲ್ಲಿ ನಾರ್ವೇಯ ಕಾಂಗ್ಸ್‌ಬರ್ಗ್ ಡಿಜಿಟಲ್ ಸಂಸ್ಥೆ ಮುಂದಿದೆ. ಕೃತಕ ಬುದ್ದಿಮತ್ತೆ ಮೂಲಕ ಕೈಗಾರಿಕಾ ದತ್ತಾಂಶ ಹೆಚ್ಚು ಉಪಯೋಗಿಸಬಹುದಾದ, ಅರ್ಥಪೂರ್ಣವಾಗಿಸುವ ಮೂಲಕ ಕೆಲಸದ ಭವಿಷ್ಯವನ್ನು ರೂಪಿಸುತ್ತಿದೆ.
ಕಂಪನಿಯು ಬೆಂಗಳೂರಿನಲ್ಲಿ 10 ದಶಲಕ್ಷ ಡಾಲರ್ ಹೂಡಿಕೆ ಮಾಡಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಮತ್ತಷ್ಟು ವಿಸ್ತರಿಸಲು ಉದ್ದೇಶಿಸಿದೆ. ಹೆಚ್ಚು ಸಮರ್ಥನೀಯ, ಉದ್ಯಮ 5.0 ಒಳಗೊಂಡಂತೆ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡಲಿದೆ ಎಂದು ಹೇಳಿದರು.
ಕಾಂಗ್ಸ್‌ಬರ್ಗ್ ಡಿಜಿಟಲ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರದೊಂದಿಗೆ ಸಂಭಾವ್ಯ ಸಹಭಾಗಿತ್ವಕ್ಕೆ ಉತ್ಸುಕರಾಗಿದ್ದೇವೆ. ಉನ್ನತ ಕೌಶಲ್ಯದ ಕೃತಕ ಬುದ್ದಿಮತ್ತೆ ಆಧಾರಿತ ಕಾರ್ಯಶಕ್ತಿಯ ಮೂಲಕ ಸುಸ್ಥಿರ ಕೈಗಾರಿಕಾ ಪರಿಸರ ವ್ಯವಸ್ಥೆಗೆ ಹೆಚ್ಚಿನ ಕೊಡುಗೆ ನೀಡಲಿದೆ.
ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಗೆ ಬೆಂಬಲ ನೀಡಲು ನಮ್ಮ ಕಂಪೆನಿ ಬದ್ಧವಾಗಿದೆ ಮತ್ತು ಸಹಭಾಗಿತ್ವ ಹಾಗೂ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಲಾಗುವುದು ಎಂದರು.