

ಬೆಂಗಳೂರು: ರಿಪಬ್ಲಿಕ್ ಆಫ್ ಕಲಬುರಗಿಯಾಗಿದೆ. ರಾಜ್ಯದ ವ್ಯವಸ್ಥೆಯೇ ಬೇರೆ; ಕಲಬುರಗಿ ವ್ಯವಸ್ಥೆಯೇ ಬೇರೆಯಾಗಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಟ್ಟಹಾಸ ಮೆರೆಯುತ್ತಿದ್ದಾರೆ ಪೊಲೀಸರು ಕೂಡ ಅಲ್ಲಿ ಪ್ರಿಯಾಂಕ ಖರ್ಗೆಯವರು ಹೇಳಿದ್ದೇ ಆಡಳಿತ ಎಂಬಂತೆ ನಡೆದುಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ಕಲಬುರಗಿ ಜಿಲ್ಲೆಯಲ್ಲಿ ಖರ್ಗೆ ಮನೆತನದ ದೊಡ್ಡ ಪಾರುಪತ್ಯ ನಡೆದಿದೆ. ಬೇರೆ ಯಾರಿಗೂ ಮಾತನಾಡಲು ಅವಕಾಶ ಇಲ್ಲ; ವಿಶೇಷವಾಗಿ ದಲಿತ ಸಮುದಾಯಗಳು ಅವರ ವಿರುದ್ಧ ಮಾತನಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ, ಪೊಲೀಸರು ಅಂಥವರ ಮನೆ ಮುಂದೆ ಇರುತ್ತಾರೆ ಎಂವ ಆತಂಕ ವ್ಯಕ್ತಪಡಿಸಿದರು.
ಕಲ್ಬುರ್ಗಿಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಎಲ್ಲದರಲ್ಲೂ ತಮಗೆ ಬೇಕಾದವರನ್ನು ಸಹಚರರನ್ನಾಗಿ ಜೋಡಿಸಿಕೊಂಡು ಎಲ್ಲ ರೀತಿಯ ದಂಧೆಗಳಲ್ಲಿ ತೊಡಗಿದ್ದಾರೆ. ಆಡಳಿತ ವ್ಯವಸ್ಥೆ ಪೂರ್ತಿ ಪಕ್ಷಪಾತಿಯಾಗಿದೆ ಎಂದು ದೂರಿದರು.
ಮರಳು ದಂಧೆ ಇದೆ. ಟೈಲ್ಸ್, ಸಿಮೆಂಟ್ ಫ್ಯಾಕ್ಟರಿಗಳ ದಂಧೆ ಇದೆ; ಎಲ್ಲ ರೀತಿಯ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಟ್ರಾಕ್ಟ್ ವಿಚಾರಕ್ಕೂ ಬೇಕಾದವರ ನೇಮಕ ಆಗಿದೆ. ಇದೇ ಕಾರಣಕ್ಕೂ ಸಚಿನ್ ಅವರ ಆತ್ಮಹತ್ಯೆ ಆಗಿದೆ. ಇದರ ಉನ್ನತ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
ಪ್ರಿಯಾಂಕ ಖರ್ಗೆ ಅವರನ್ನು ಮೊದಲು ಸಚಿವ ಸ್ಥಾನದಿಂದ ಕೈಬಿಡಬೇಕು. ಅಲ್ಲದೆ ತಕ್ಷಣ ಅವರನ್ನು ಬಂಧಿಸಬೇಕು. ಅವರು ಸಂಪೂರ್ಣವಾಗಿ ತನಿಖೆಗೆ ಸಹಕರಿಸುವಂತೆ ಸರಕಾರ ಮಾಡಬೇಕು. ಇಲ್ಲವಾದರೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಅಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೃತ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಆಂದೋಲ ಸ್ವಾಮೀಜಿ, ಚಂದು ಪಾಟೀಲ, ಬಸವರಾಜ ಮತ್ತಿಮೂಡ ಅವರನ್ನು ಸುಪಾರಿ ಕೊಟ್ಟು ಸಾಯಿಸುವ ವಿಚಾರವೂ ಪ್ರಸ್ತಾಪವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.