

ನವದೆಹಲಿ: ಕಳೆದ ವರ್ಷ ಉತ್ತರಾಖಂಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದೀಗ ಮತ್ತೊಮ್ಮೆ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಅಖಾಡ ಸಿದ್ದವಾಗುತ್ತಿದ್ದು, 2024ರ ಲೋಕಸಭೆ ಚುನಾವಣೆಗೂ ಮುನ್ನವೇ ತನ್ನ 4 ನಾಯಕರನ್ನು ಉಸ್ತುವಾರಿಯನ್ನಾಗಿ ಬಿಜೆಪಿ ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿ ಹೇಳಿಕೆಯನ್ನು ಪ್ರಕಟಿಸಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಭೂಪೇಂದ್ರ ಯಾದವ್ ಅವರನ್ನು ಕ್ರಮವಾಗಿ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಿದೆ.
ಕಳೆದ ವರ್ಷದ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಪ್ರಲ್ಹಾದ್ ಜೋಶಿ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದ ಸಮಯದಲ್ಲೇ ಪಕ್ಷ ಅಧಿಕಾರವನ್ನು ಪಡೆದುಕೊಂಡಿತು. ಇನ್ನು ಕರ್ನಾಟಕ ವಿಧಾನಸಭಾ ಎಲೆಕ್ಷನ್ನ ಟಿಕೆಟ್ ಹಂಚಿಕೆಯಲ್ಲೂ ಜೋಶಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಜೋಶಿ, ಭೂಪೇಂದ್ರ ಯಾದವ್ ನಂತರ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಓಂ ಪ್ರಕಾಶ್ ಮಾಥುರ್ ಅವರನ್ನು ಕ್ರಮವಾಗಿ ತೆಲಂಗಾಣ, ಛತ್ತೀಸಗಢ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ,(ಏಜೆನ್ಸೀಸ್).