ಜಿಲ್ಲಾಡಳಿತದ ಕಾರ್ಯವೈಖರಿಗೆ ಪರಂ ಅಸಮಾಧಾನ

DC_Office_Param
Published on

ತುಮಕೂರು: ತುಮಕೂರಿನ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲಾಡಳಿತದ ಕಾರ್ಯ ವೈಖರಿ ಸಾಕಷ್ಟು ಸುಧಾರಣೆಯಾಗಬೇಕು. ಯಾವುದೇ ರೀತಿಯ ಅಪೇಕ್ಷೆ ಇಲ್ಲದೆ ಜನಸಮುದಾಯಕ್ಕೆ ಕೆಲಸಗಳು ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಹಸೀಲ್ದಾರ್​ ಕಚೇರಿಗೆ ಸಾಮಾನ್ಯ ಪ್ರಜೆ, ಬಡ ರೈತ ತೊಂದರೆ, ನೋವಿನಿಂದ ಬರುತ್ತಾನೆ. ಅಂತವರ ಕೆಲಸಗಳನ್ನು ಸುಲಭವಾಗಿ ಮಾಡಿಕೊಡಬೇಕು. ಆತ ನಗುವಿನಿಂದ ಹೋದರೆ ಅದೇ ಒಳ್ಳೆಯ ಆಡಳಿತ. ಒಂದು ದಾಖಲೆ ಪಡೆದುಕೊಳ್ಳಲು ಹತ್ತಾರು ಬಾರಿ ಅಲೆಯಬಾರದು. ಈ ವಿಚಾರವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತೆ ಛಾಟಿ ಬೀಸಿದರು.

ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅನೇಕ ನೀತಿಗಳನ್ನು, ತೀರ್ಮಾನಗಳನ್ನು ಮಾಡುತ್ತೇವೆ. ಅವುಗಳು ಜನರಿಗೆ ತಲುಪುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಶಾಹಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ಕಟ್ಟಿಸಿದ್ದಾರೆ. ನಮಲ್ಲಿ ಅಂತಹ ಕಟ್ಟಡ ಇಲ್ಲ ಎಂದು ಪರಮೇಶ್ವರ ಬೇಸರಿಸಿದರು.

ಈ ವೇಳೆ ಗ್ರಾಮಆಡಳಿತಾಧಿಕಾರಿ ಹುದ್ದೆಗೆ 2ನೇ ಹಂತದಲ್ಲಿ ನೇಮಕವಾಗಿರುವ 15 ಜನರಿಗೆ ಆದೇಶ ಪತ್ರ ವಿತರಿಸಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net