ಹೂಡಿಕೆಗೆ ಅಮೆರಿಕ ಉದ್ಯಮಿಗಳಿಗೆ ಆಹ್ವಾನ

America
Published on

ಬೆಂಗಳೂರು: ಅಮೆರಿಕದ ಮಾಂಟ್ಗೊಮೆರಿ ಪ್ರಾಂತ್ಯದಿಂದ ಆಗಮಿಸಿರುವ 30ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಬಂಡವಾಳ ಹೂಡಿಕೆ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ರಾಜ್ಯ ಸಚಿವರ ತಂಡವು ಶುಕ್ರವಾರ ರಾತ್ರಿ ಮಹತ್ವದ ಮಾತುಕತೆ ನಡೆಸಿತು.

ಸಚಿವರ ನಿಯೋಗದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರಿದ್ದರು.

ಅಮೆರಿಕದ ಉದ್ಯಮಿಗಳ ನಿಯೋಗದ ನೇತೃತ್ವವನ್ನು ಮಾಂಟೊಗೊಮೇರಿ ಪ್ರಾಂತ್ಯದ ಆಡಳಿತ ಮುಖ್ಯಸ್ಥ ಎಲ್ರಿಚ್ ಮಾರ್ಕ್ ವಹಿಸಿದ್ದರು. ನಗರದ ಹೋಟೆಲ್ವೊಂದರಲ್ಲಿ ಸಭೆ ನಡೆಯಿತು.

ಎಂ.ಬಿ. ಪಾಟೀಲ ಅವರು ಅಮೆರಿಕ ಭೇಟಿ ನೀಡಿದಾಗ ಅಲ್ಲಿನ ಕಂಪನಿಗಳಿಗೆ ರಾಜ್ಯದಲ್ಲಿರುವ ಹೂಡಿಕೆ, ರಫ್ತು, ಉತ್ತೇಜನಾ ನೀತಿಗಳನ್ನು ಅರಿಯಲು ಕರ್ನಾಟಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ. ಪಾಟೀಲ, ‘ರಾಜ್ಯದಲ್ಲಿ ಅಮೆರಿಕದ ಎರಡು ಸಾವಿರಕ್ಕೂ ಹೆಚ್ಚು ಕಂಪನಿಗಳಿದ್ದು, 2025ರ ಹೊತ್ತಿಗೆ ಇವುಗಳ ವಾರ್ಷಿಕ ವಹಿವಾಟು 230 ಬಿಲಿಯನ್ ಡಾಲರ್ ಮೀರುವ ನಿರೀಕ್ಷೆ ಇದೆ. ಈ ಕಂಪನಿಗಳು 13 ಲಕ್ಷ ಜನರಿಗೆ ಉದ್ಯೋಗ ನೀಡಿದ್ದು, ಎರಡು ದಶಕಗಳಲ್ಲಿ ಭಾರತ ಮತ್ತು ಅಮೆರಿಕದ ವಾಣಿಜ್ಯ ವಹಿವಾಟು ಏಳು ಪಟ್ಟಿಗಿಂತ ಹೆಚ್ಚು ಬೆಳೆದಿದೆ. ಮುಂಬರುವ ದಿನಗಳಲ್ಲಿ ಅಮೆರಿಕದ ಕಂಪನಿಗಳ ಹೂಡಿಕೆ ರಾಜ್ಯದಲ್ಲಿ ಮತ್ತಷ್ಟು ಹೆಚ್ಚಬೇಕು ಎಂದು ಆಹ್ವಾನಿಸಿದರು.

ರಫ್ತು ವಹಿವಾಟಿನಲ್ಲೂ ರಾಜ್ಯ ಮುಂದೆ

ಅಮೆರಿಕದ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಎಲ್ಲ ಅನುಕೂಲಗಳನ್ನೂ ರಾಜ್ಯ ಸರಕಾರ ತ್ವರಿತವಾಗಿ ಒದಗಿಸಿ ಕೊಡಲಿದೆ ಎಂದು ಅವರು ಭರವಸೆ ನೀಡಿದರು.

ಕರ್ನಾಟಕವು ಹಿಂದಿನಿಂದಲೂ ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆ ಸ್ನೇಹಿ ರಾಜ್ಯವಾಗಿದ್ದು, ನಮ್ಮ ಜಿಡಿಪಿ 280 ಬಿಲಿಯನ್ ಡಾಲರುಗಳಷ್ಟಿದೆ. ಜತೆಗೆ ರಫ್ತು ವಹಿವಾಟಿನಲ್ಲೂ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದ್ದೇವೆ. ಅಲ್ಲದೆ ಬೆಂಗಳೂರು ನಗರವು ಉದ್ಯಮಗಳ ದೃಷ್ಟಿಯಿಂದ ಜಾಗತಿಕ ಮಟ್ಟದ ಅಗ್ರ 25 ನಗರಗಳಲ್ಲಿ ಒಂದಾಗಿದೆ ಎಂದು ನಿಯೋಗಕ್ಕೆ ವಿವರಿಸಿದರು.

ವಿವಿಧ ವಿ.ವಿ.ಗಳ ಜತೆ ಸಹಭಾಗಿತ್ವ

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಮಾತನಾಡಿ, ಅಮೆರಿಕದ ಮಾಂಟಗೊಮೇರಿ ಸೇರಿದಂತೆ ಇತರ ವಿವಿಗಳ ಜತೆಗೂ ಸಹಭಾಗಿತ್ವ ಸಾಧಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದರು.

ಮಾಂಟಗೊಮೇರಿ ಜತೆ ಕೆಲಸ

ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಮಾಂಟಗೊಮೇರಿ ಒಳ್ಳೆಯ ಕೆಲಸ ಮಾಡುತ್ತಿದ್ದು, ರಾಜ್ಯವೂ ಅದರ ಜತೆ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಹೇಳಿದರು.

ಅಮೆರಿಕದ ನಿಯೋಗದಲ್ಲಿ ಮಾಂಟಗೋಮೇರಿ ಕೌಂಟಿ ಕೌನ್ಸಿಲ್ ಅಧ್ಯಕ್ಷ ಇವಾನ್ ಗ್ಲಾಸ್, ಅಲ್ಲಿನ ಆರ್ಥಿಕ ಅಭಿವೃದ್ಧಿ ನಿಗಮದ ಸಿಇಒ ಟಾಂಪ್ಕಿನ್ಸ್ ಬಿಲ್, ವಿಶೇಷ ಯೋಜನಾ ವ್ಯವಸ್ಥಾಪಕ ಕಾಸ್ಟೆಲ್ಲೋ ಜೂಡಿ, ಲಾ ಮ್ನಾಗ್ನೋಲಿಯಾ ಕಂಪನಿಯ ಸಂಸ್ಥಾಪಕ ಕೂಂಬಾ ಗ್ರೇವ್ಸ್ , ಟಾಂಜನೈಟ್ ಫ್ರೈಟ್ ಲಾಜಿಸ್ಟಿಕ್ಸ್ ಸಿಇಒ ಮ್ಯಾಕ್ನೆಸ್ಟರ್ ಎಕ್ಸವೆರಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net