

ತಾಳಗುಪ್ಪ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೀತಾ ಶಿವರಾಜಕುಮಾರ್ ಅತ್ಯಧಿಕ ಬಹುಮತದಿಂದ ಗೆಲ್ಲುತ್ತಾರೆ. ಈಶ್ವರಪ್ಪ ಸ್ಪರ್ಧೆ ನಮಗೆ ವಿಷಯವಲ್ಲ. ಅದರಿಂದ ಲಾಭ ನಮ್ಮ ನಿರೀಕ್ಷೆಯೂ ಅಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಹುಣಸೂರು, ತಾಳಗುಪ್ಪದಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಗೊಣೂರಿನಲ್ಲಿ ಮಾತನಾಡಿದ ಅವರು, ಜನರಿಗೆ ನಮ್ಮ ಗ್ಯಾರಂಟಿ ಶೇ.95 ತಲುಪಿದೆ. ಈ ಪ್ರಯೋಜನ ಪಡೆದ ಜನರು ನಮಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ಗ್ಯಾರಂಟಿ ಇದೆ ಎಂದರು.
ವಿಶಾಲ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ನಂತರ ವಿಶಾಲ ದೇವಸ್ಥಾನ ನಿರ್ಮಿಸುತ್ತಾರೆ. ನಾವು ಅಂಬೇಡ್ಕರ್ ಆಶಯದಂತೆ ಜ್ಞಾನ ಪಸರಿಸುವ ಕೆಲಸ ಮಾಡಬೇಕಿದೆ. ರಾಜ್ಯದ ಎಲ್ಲ ಶಾಲೆಗಳು, ರಸ್ತೆಗಳು ಸುಸ್ಥಿತಿಗೆ ಬಂದರೆ ಅದು ನಮ್ಮ ಸಾಧನೆಯಾಗುತ್ತದೆ ಎಂದರು. ಸಚಿವರನ್ನು ಗ್ರಾಮಸ್ಥರು ಸನ್ಮಾನಿಸಿದರು. ತಲವಾಟ ಗ್ರಾಪಂ ಅಧ್ಯಕ್ಷ ಡಿ.ಎನ್.ಪ್ರಸನ್ನ, ಕನ್ನಪ್ಪ, ದೇವಕಿ, ಕಲ್ಪನಾ ತಲವಾಟ, ಬಂಗಾರಪ್ಪ, ಶಿವಮೂರ್ತಿ, ಬಂಗಾರಪ್ಪ ಗೊಣೂರು ಇತರರಿದ್ದರು.