

ಬಳ್ಳಾರಿ: ಗ್ಯಾರಂಟಿ ವಿಚಾರದಲ್ಲಿ ಸಚಿವ ಸಂಪುಟದ ಸದಸ್ಯರ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಅವರವರ ಅಭಿಪ್ರಾಯ ಹೇಳುವುದಕ್ಕೆ ಎಲ್ಲರೂ ಸ್ವತಂತ್ರರು. ಹೇಳೋದು ತಪ್ಪಾ? ಇದ್ಯಾವುದು ಸಚಿವ ಸಂಪುಟದ ನಿರ್ಧಾರವಲ್ಲ. ಅಭಿಪ್ರಾಯ ಹೇಳಿಕೊಳ್ಳುವದರಲ್ಲಿ ಯಾವುದೇ ತಪ್ಪಿಲ್ಲ. ಸಚಿವ ಸಂಪುಟದಲ್ಲಿ ನಿರ್ಧಾರವಾದರೆ ಮಾತ್ರ ಪರಿಷ್ಕರಣೆಯ ಬಗ್ಗೆ ಯೋಚನೆ ಎಂದರು.
ಇನ್ನು ಗ್ಯಾರಂಟಿ ಯೋಜನೆ ಪರ ಬ್ಯಾಟ್ ಬೀಸಿದ ಸಚಿವರು, "ನನ್ನ ಅಭಿಪ್ರಾಯ ಹೇಳುವ ಸ್ಥಳದಲ್ಲಿ ಹೇಳ್ತೇನೆ. ಬಜೆಟ್ ಗಾತ್ರ ಹೆಚ್ಚು ಮಾಡಿದ್ದೇವೆ. ಬಜೆಟ್ ಕಡಿತ ಮಾಡಿ ಗ್ಯಾರಂಟಿಯನ್ನು ಎಂದಿಗೂ ಕೊಟ್ಡಿಲ್ಲ. ಗ್ಯಾರಂಟಿ ಯೋಜನೆ ಎಲ್ಲರಿಗೂ ಸಹಾಯಕವಾಗ್ತಿದೆ. ರಾಜ್ಯದ ಅಭಿವೃದ್ಧಿಗೆ ಹಣದ ಅಗತ್ಯವಿದೆ. ಶಕ್ತಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರು ಲಾಭ ಪಡೆದಿದ್ದಾರೆ. ಎರಡು ಸಾವಿರ ಹಣ ಮನೆ ಖರ್ಚನ್ನು ತೂಗುತ್ತಿದೆ. ಗ್ಯಾರಂಟಿಯಿಂದ ಸರ್ಕಾರದ ಯಾವ ಯೋಜನೆಗೆ ಹಿನ್ನಡೆಯಾಗಿಲ್ಲ" ಎಂದು ಹೇಳಿದರು.
"ಕೇಂದ್ರ ಸರ್ಕಾರದಿಂದ ಬರುವ ಅನುದಾನ ಕಡಿತ ಹಿನ್ನಲೆ ರಾಜ್ಯಕ್ಕೆ ಸಾಕಷ್ಟು ತೊಂದರೆಯಾಗ್ತಿದೆ. ಹಣಕಾಸು ಆಯೋಗದವರು ಶಿಫಾರಸ್ಸು ಮಾಡಿದರು ಕೇಂದ್ರ ಸರ್ಕಾರ ಹಣ ನೀಡ್ತಿಲ್ಲ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ನಮ್ಮ ತೆರಿಗೆಯಲ್ಲಿ ನಮ್ಮ ಪಾಲು ಬರುತ್ತಿಲ್ಲ. ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿಯೂ ಅನ್ಯಾಯವಾಗ್ತಿದೆ. ಮಧ್ಯ ಕರ್ನಾಟಕ್ಕೆ ಅನುಕೂಲವಾಗುವ ಭದ್ರ ಮೇಲ್ದಂಡೆ ಯೋಜನೆಗೆ 5300 ರೂ. ಕೋಟಿಯಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ. ಮೇಕೇದಾಟು ಯೋಜನೆಗೆ ಇಂದಿಗೂ ಅನುದಾನ ನೀಡಿಲ್ಲ" ಎಂದು ದೂರಿದರು.
"ಪ್ರಧಾನಿ, ಗೃಹ ಸಚಿವರಿಗೆ ಹಲವು ಭಾರಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ನೀಡುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಬರ ಪರಿಹಾರ ವಿಷಯ ಮಲತಾಯಿ ಧೋರಣೆ ತೋರುತ್ತಿದ್ದಾರೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.