

ಶಿವಮೊಗ್ಗ: ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ 15 ದಿನಗಳಲ್ಲಿ ಈ-ಆಡಳಿತ ಕಡ್ಡಾಯವಾಗಿ ಜಾರಿಯಾಗಬೇಕು. ಅಧಿಕಾರಿಗಳು ಯಾವುದೇ ನೆಪ ಹೇಳುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೇ ನಿಗಾ ವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶಿವಮೊಗ್ಗದ ಸರ್ಕಾರಿ ಕಚೇರಿಗಳಲ್ಲಿ ಮುಂದೆ ಕಂಪ್ಯೂಟರ್, ಹಿಂದೆ ಮ್ಯಾನವಲ್ ಎಂಬ ಸ್ಥಿತಿ ಇದೆ. ತಕ್ಷಣದಿಂದಲೇ ಅಧಿಕಾರಿಗಳು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ಸರ್ಕಾರದಿಂದ ಬಂದ ಒಂದು ಅರ್ಜಿಗೆ ಉತ್ತರ ನೀಡಲು 5 ತಿಂಗಳು ತೆಗೆದುಕೊಳ್ಳಲಾಗಿದೆ. ಇ-ಆಡಳಿತ ಜಾರಿಯಾದರೆ ಕಡತ ವಿಲೇ ಕಣ್ಣಿಗೆ ಕಾಣುತ್ತದೆ. ಆದರೆ ಜನರು ಸದಾ ತಮ್ಮ ಬಾಗಿಲ ಮುಂದೆ ಕೈಕಟ್ಟಿ ನಿಲ್ಲುವುದು ಎನ್ನುವುದು ಅಧಿಕಾರಿಗಳ ಮನಸ್ಥಿತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಭೂಮಿ ಮಂಜೂರಾತಿ ವಿಷಯದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಜಿಲ್ಲಾಧಿಕಾರಿಗಳು ಶರಾವತಿ ಸಂತ್ರಸ್ತರು ಹಾಗೂ ಇತರ ಭೂಮಿ ಮಂಜೂರಾತಿ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಇದನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು. ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಜ್ಞರ ಸಮಿತಿ ರಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರದಿಂದ ಈ ಕುರಿತು ಸೆಟ್ಲಮೆಂಟ್ ಮಾಡಲು ಅಧಿಕಾರಿಗಳ ನೇಮಕ ಮಾಡಲಾಗುತ್ತಿದೆ ಎಂದರು.
ಆರ್‌ಟಿಸಿಗಳಲ್ಲಿ ಜೆ-ಸ್ಲಿಪ್ ಮತ್ತು ಪೌತಿ ಖಾತೆಗಳನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಸ್ವಯಂಚಾಲಿತ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು. ಜೆ-ಸ್ಲಿಪ್ ಮತ್ತು ಪೌತಿ ಖಾತೆಗಳಿಗೆ ಈಗಿನ ವ್ಯವಸ್ಥೆಯೇ ಮುಂದುವರಿಯಲಿದೆ. ವಿವಾದದ ಮ್ಯೂಟೇಶನ್‌ಗಳ ವಿಲೇಗೆ ಸರಾಸರಿ 30 ದಿನ ತೆಗೆದುಕೊಳ್ಳಲಾಗುತ್ತಿತ್ತು. ಈಗ 10 ದಿನದೊಳಗೆ ಆಗುತ್ತಿದೆ. ಒಂದು ವಿವಾದಿತ ಮ್ಯೂಟೇಶನ್ ವಿಲೇಗೆ ಸರಾಸರಿ ಒಂದು ವರ್ಷ(353 ದಿನ) ತೆಗೆದುಕೊಳ್ಳಲಾಗುತ್ತಿತ್ತು. ಈಗ ಅದನ್ನು 135 ದಿನಗಳಿಗೆ ಇಳಿಸಲಾಗಿದೆ. ಕನಿಷ್ಠ 90 ದಿನದೊಳಗೆ ಇಳಿಸುವ ಗುರಿ ಹೊಂದಿದ್ದೇವೆ. 60ರಿಂದ 65 ದಿನದೊಳಗೆ ವಿಲೇ ಮಾಡಬಹುದು. ಇದರಿಂದ ಜನರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಎಂದರು.
ಸಬ್ ರಿಜಿಸ್ಟ್ರರ್ ಕಚೇರಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ
ಸಬ್ ರಿಜಿಸ್ಟ್ರರ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಇಲ್ಲ. ನೆಟ್‌ವರ್ಕ್ ಸಮಸ್ಯೆ ಇದೆ. ಆದರೆ ಸರ್ವರ್ ಇಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ನೋಂದಣಿ ಕಚೇರಿಯಲ್ಲಿ ಸರ್ವರ್ ಅಲ್ಲ ಬದಲಾಗಿ ನೆಟ್‌ವರ್ಕ್ ಸಮಸ್ಯೆ ಇದ್ದು ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗೆ ಸೂಕ್ತ ಸೂಚನೆ ಮತ್ತು ಸಲಹೆ ನೀಡಿದರು. ಇಲಾಖೆಯಲ್ಲಿ ಐದು ವರ್ಷಗಳಿಂದ ಮಾರುಕಟ್ಟೆ ಬೆಲೆ ಪರಿಷ್ಕರಣೆಯಾಗಿರಲಿಲ್ಲ. ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಕ್ಕೆ ಸುಮಾರು ನಾಲ್ಕು ಪಟ್ಟು ವ್ಯತ್ಯಾಸವಿದೆ. ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 3ರಿಂದ 4 ನಾಲ್ಕು ಹೆಚ್ಚಿದೆ. ಈ ತಾರತಮ್ಯ ಸರಿಪರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಾರುಕಟ್ಟೆ ದರ ಪರಿಷ್ಕರಿಸಿದ್ದು, ಆಕ್ಷೇಪಣೆಗಳಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಆಕ್ಷೇಪಣೆಗಳನ್ನು ಜನರು ಸಲ್ಲಿಸಬಹುದು ಎಂದರು.