ಮಲೆನಾಡಿನ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಸಚಿವ ಖಂಡ್ರೆ

ti na srinivas
ತೀ.ನ.ಶ್ರೀನಿವಾಸ, ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ
Published on

ಶಿವಮೊಗ್ಗ: ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಶಿವಮೊಗ್ಗದಲ್ಲಿ ಕಾಟಾಚಾರಕ್ಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇಲ್ಲಿನ ಜನರ ಸಮಸ್ಯೆ ಆಲಿಸಲು ಅವರಿಗೆ ಸಮಯವಿರಲಿಲ್ಲ. ಅವರ ಗಮನಸೆಳೆಯಲು ಮುಂದಾದರೆ ಅದಕ್ಕೂ ಸ್ಪಂದಿಸಲಿಲ್ಲ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಸಚಿವರು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಮಯ ಕಳೆದರು. ಮನವಿ ನೀಡಲು ಮುಂದಾದವರನ್ನು ಪೊಲೀಸರ ಮೂಲಕ ನಿಯಂತ್ರಿಸಲಾಯಿತು. ಕೆಲವು ವಿಷಯಗಳಲ್ಲಿ ಎಲ್ಲ ರಾಜಕಾರಣಿಗಳು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಶರಾವತಿ ಮುಳುಗಡೆ ಜನರ ವಿಷಯದಲ್ಲಿ ಮಾತ್ರ ಯಾರೂ ಸ್ಪಂದಿಸುವುದಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಿಸುವ ಸಂಬಂಧ ಸುಪ್ರೀಂ ಕೋರ್ಟ್‌ಗೆ ಐಎ(ಮಧ್ಯಂತರ ಅರ್ಜಿ) ಹಾಕಿರುವುದನ್ನೇ ದೊಡ್ಡ ಸಾಧನೆ ಎಂಬಂತೆ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆ ಒಂದು ಸಾಲಿನದಾಗಿತ್ತು. ಯಾವುದೇ ದಾಖಲೆಗಳನ್ನು ಪ್ರಸ್ತಾವನೆಯಲ್ಲಿ ಕಳಿಸಿರಲಿಲ್ಲ. ಈಗ ಹಾಕಿರುವ ಐಎ ಯಾವ ಮಟ್ಟಿಗೆ ಸದೃಢವಾಗಿದೆ ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದರು.
ಜಿಲ್ಲೆಯ ಜನರು ಬಂಗಾರಪ್ಪ, ಯಡಿಯೂರಪ್ಪ ಇಬ್ಬರನ್ನೂ ಮುಖ್ಯಮಂತ್ರಿ ಮಾಡಿದ್ದರು. ಆದರೆ ಶರಾವತಿ ಸಂತ್ರಸ್ತರ ಸಮಸ್ಯೆಯಾಗಲಿ, ಅರಣ್ಯ, ಬಗರ್‌ಹುಕುಂ ಸಮಸ್ಯೆಯಾಗಲಿ ಪರಿಹಾರವಾಗಲೇ ಇಲ್ಲ. ಈಗ ಅವರ ಮಕ್ಕಳನ್ನು ಶಾಸಕ, ಸಂಸದರನ್ನಾಗಿ ಮಾಡಿದ್ದಾರೆ. ಅವರು ಕೂಡ ರಾಜಕೀಯ ಶುರು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ಶರಾವತಿ ಸಂತ್ರಸ್ತರು, ಬಗರ್ ಹುಕುಂ ಹಕ್ಕುಪತ್ರಕ್ಕಾಗಿ ತಾವು ಪಾದಯಾತ್ರೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇದೆಲ್ಲ ಶಾಸಕ, ಸಚಿವನಾಗಲು ಮಾಡಿದ ಹೋರಾಟವಷ್ಟೇ. ಅಧಿಕಾರ ಸಿಕ್ಕ ಮೇಲೆ ನೀವೇನು ಮಾಡಿದ್ದೀರಿ ಎಂಬುದನ್ನು ಜನರ ಮುಂದೆ ಹೇಳಿ ಎಂದು ಸವಾಲು ಹಾಕಿದರು.
ಮುಂದಿನ ವಾರ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಮಲೆನಾಡಿನ ಜನರ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಪ್ರಮುಖರಾದ ವಿನಾಯಕ, ಕುಮಾರನಾಯ್ಕ, ಆರ್ಮುಗಂ, ಸುಧಾ, ದಶರಥ ನಾಯ್ಕ, ಶರವಣ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net