ಸಚಿವ ಜೋಶಿ ಬುಲಾವ್: ಆರ್.ಅಶೋಕ್ ದೆಹಲಿಗೆ ದಿಢೀರ್ ದೌಡು

Yatnal Vijayendra
Published on

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಿಗೆ ಸಮಜಾಯಿಷಿ ಕೇಳಿ ನೋಟಿಸ್ ಜಾರಿಯಾದ ಬಿಜೆಪಿಯಲ್ಲಿ ಕ್ಷಿಪ್ರ ಚಟುವಟಿಕೆಗಳು ನಡೆದಿವೆ. ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬುಲಾವ್ ಮೇರೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಬುಧವಾರ ಬೆಳಗ್ಗೆ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಪಕ್ಷದ ರಾಜ್ಯ ಸಮಿತಿಯಲ್ಲಿನ ಅಂತಃಕಲಹ ಬಗೆಹರಿಸುವ ನಿಟ್ಟಿನಲ್ಲಿ ಹಿರಿಯ ನಾಯಕರ ತಂಡ ತನ್ನ ಪ್ರಯತ್ನವನ್ನು ಚುರುಕುಗೊಳಿಸಿದೆ. ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಅಥವಾ ಬಿಟ್ಟರೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮಬೀರಿ, ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎನ್ನುವುದು ಹಿರಿಯರ ಆತಂಕಕ್ಕೆ ಕಾರಣವಾಗಿದೆ.

ಸಚಿವ ಪ್ರಲ್ಹಾದ ಜೋಶಿಯವರ ನಿವಾಸದಲ್ಲಿ ಸೋಮವಾರ ರಾತ್ರಿ ಭೋಜನ ಕೂಟ ನೆಪದಲ್ಲಿ ಹಿರಿಯರು ಸೇರಿ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಯತ್ನಾಳ್ ಮತ್ತವರ ತಂಡವು ಭಾಗವಹಿಸಿತ್ತು ಎನ್ನಲಾಗಿದ್ದು, ಈ ಮಾತುಕತೆಯು ಶಿಸ್ತು ಸಮಿತಿ ಮುಂದೆ ಯತ್ನಾಳ್ ಬುಧವಾರ ಹಾಜರಾಗಲು ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾಗೆ ವಸ್ತುಸ್ಥಿತಿ ವಿವರಣೆ

ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೊಬ್ಬರು ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯದ ವಸ್ತುಸ್ಥಿತಿ ವಿವರಣೆ ನೀಡಿದ್ದಾರೆ. ಶೋಕಾಸ್ ನೋಟಿಸ್ ನೀಡಿದ ನಂತರದ ಬೆಳವಣಿಗೆ ಬಳಸಿಕೊಂಡು ಇಬ್ಬರನ್ನೂ ಕರೆಯಿಸಿ ಮುಖಾಮುಖಿ ಚರ್ಚೆಗೆ ಅವಕಾಶ, ರಾಜಿಸಂಧಾನದ ಮುಖೇನ ಬಿಕ್ಕಟ್ಟು ಶಮನ ಲೇಸು ಎನ್ನುವ ಅಭಿಪ್ರಾಯ ಮಂಡಿಸಿದರು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಯತ್ನಾಳ್ ಬುಧವಾರ ಗೌಪ್ಯವಾಗಿ ಭೇಟಿಯಾಗಿದ್ದಾರೆ. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮಾಹಿತಿ ಪಡೆದುಕೊಂಡಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ವರಿಷ್ಠರಿಗೆ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಸ್ಪಷ್ಟ ಸಂದೇಶ ರವಾನೆ

ಕಳೆದ ಒಂದು ವರ್ಷದಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ, ಬಹಿರಂಗ ಆರೋಪ ಮುಂದುವರಿಸಿದ್ದರು. ಪಕ್ಷದ ಸೂಚನೆ ಧಿಕ್ಕರಿಸಿ ನಡೆಸಿದ ವಕ್ಫ್ ಜಾಗೃತಿ ಅಭಿಯಾನ ವೇಳೆ ರಾಜ್ಯ ಸರ್ಕಾರಕ್ಕಿಂತ ಹೆಚ್ಚಾಗಿ ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದರು.

ಯತ್ನಾಳ್ ಹೆಗಲ ಮೇಲೆ ಯಾರೋ ಬಂದೂಕಿಟ್ಟು ಬಿಎಸ್ ವೈ, ವಿಜಯೇಂದ್ರಗೆ ಹಣಿಯಲು ಪ್ರಯತ್ನಿಸುತ್ತಿದ್ದಾರೆ ಎಂದ ಸಂದೇಹವಿತ್ತು. ಇದರಿಂದ ರೊಚ್ಚಿಗೆದ್ದ ಪಕ್ಷ ನಿಷ್ಠರ ನಣ ಪ್ರತಿತಂತ್ರ ಹೂಡಿತ್ತು. ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಬಳಿಕ ವರಿಷ್ಠರು ಯಾರ ಪರವಾಗಿಯೂ ಇಲ್ಲವೆಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಇದೀಗ ಯತ್ನಾಳ್ ಕ್ರಮಕೈಗೊಳ್ಳಬೇಕೆಂಬ ಒತ್ತಡದ ಅಖಾಡಕ್ಕೆ ಪಕ್ಷದ 32 ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು ಧುಮುಕಿದ್ದಾರೆ.

ಹಾನಿ ನಿಯಂತ್ರಣಕ್ಕೆ ವರಿಷ್ಠರು ರಂಗ ಪ್ರವೇಶಿಸಿದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಹಿರಿಯರು ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಳಜಗಳ ಇತ್ಯರ್ಥದ ಭಾಗವಾಗಿ ಮಾತುಕತೆಗೆ ವೇದಿಕೆ ಸಜ್ಜಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಾತುಕತೆಗೆ ವೇದಿಕೆ ಸಜ್ಜು ಯತ್ನ

ವರಿಷ್ಠರ ಆಣತಿಯಂತೆ ಪ್ರಲ್ಹಾದ ಜೋಶಿ‌ ಈ ಪ್ರಯತ್ನ ಮುಂದುವರಿಸಿದ್ದು, ಸಂಸದರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದಾರೆ. ಆರ್.ಅಶೋಕ್ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಅವರ ಅಭಿಪ್ರಾಯವನ್ನು ಪಡೆಯುತ್ತಿದ್ದಾರೆ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಯಬೇಕು ಎನ್ನುವುದು ಹಿರಿಯ ನಾಯಕರ ಒತ್ತಾಸೆಯಾಗಿದೆ.

ಯತ್ನಾಳ್ ಬಾಯಿ ಮುಚ್ಚಿಸುವ ಶಕ್ತಿ ನನಗಿಲ್ಲದಿದ್ದರೂ ಕಾರ್ಯಕರ್ತರಿಗಿದೆ ಎಂದು ಬಿ.ವೈ.ವಿಜಯೇಂದ್ರ ಪದೇ ಪದೆ ಹೇಳಿದ್ದಾರೆ. ಇದೀಗ ಅಂತಹದೊಂದು ವಾತಾವರಣ ಸೃಷ್ಟಿ, ಶೋಕಾಸ್ ನೋಟಿಸ್ ಜಾರಿಯಿಂದ ಸಮಾಧಾನ ತಂದ ಭಾವನೆಯಲ್ಲಿದ್ದಾರೆ. ಅಂತಃಕಲಹ ಇತ್ಯರ್ಥದ ವಿಷಯ ಪಕ್ಷದ ರಾಷ್ಟ್ರೀಯ ನಾಯಕರ ಅಂಗಳದಲ್ಲಿದೆ ಎಂದು ಹೇಳುವ ಮೂಲಕ ಮುಕ್ತ ಮಾತುಕತೆಗೆ ಸಿದ್ಧವೆಂದು ವಿಜಯೇಂದ್ರ ಸೂಚ್ಯವಾಗಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net