ರೌಡಿಗಳ ನಡುವೆ ರಾಜಿ ಸಂಧಾನ ಮಾಡಿದ್ದ ಸಚಿವ ಜಮೀರ್!

minister
minister zameer khan
Published on

ಬೆಂಗಳೂರು: ಜ್ಞಾನಭಾರತಿ ಬಳಿಯ ಮುತ್ತುರಾಯನಗರದಲ್ಲಿ ಕೊಲೆಯಾದ ರೌಡಿ ನಾಗರಾಜ ಅಲಿಯಾಸ್ ನಾಗ ಮತ್ತು ಆತನ ಎದುರಾಳಿ ಗುಂಪಿನ ನಡುವೆ ಸಚಿವ ಜಮೀರ್ ಅಹಮ್ಮದ್ ಅವರು ಕೆಲ ತಿಂಗಳುಗಳ ಹಿಂದೆ ರಾಜಿ ಪಂಚಾಯಿತಿ ಮಾಡಲು ಯತ್ನಿಸಿದ್ದ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಪರಾಧ ಹಿನ್ನೆಲೆಯುಳ್ಳ ನಾಗರಾಜ ಎಂಟು ತಿಂಗಳ ಹಿಂದೆ ವೆಂಕಟೇಶ್ ಎಂಬಾತನನ್ನು ಕೊಲ್ಲುವುದಾಗಿ ೇಸ್‌ಬುಕ್ ಲೈವ್‌ನಲ್ಲಿ ಬೆದರಿಕೆ ಹಾಕಿದ್ದ. ನಾಗರಾಜ ಬೈಕ್ ಸವಾರಿ ಮಾಡುತ್ತಾ ೇಸ್‌ಬುಕ್ ಲೈವ್‌ನಲ್ಲಿ, ‘‘ನಿನ್ನ ಕೊಲೆ ಮಾಡುವೆ. ಇದನ್ನ ಸೇವ್ ಮಾಡಿಕೊ ಶಿಷ್ಯ. ಬದುಕಬೇಕೆಂದರೆ ಕ್ಷಮೆ ಕೇಳು, ಇಲ್ಲವಾದರೆ ಖಂಡಿತ ಕೊಲೆ ಮಾಡುವೆ,’ ಎಂದು ವೆಂಕಟೇಶ್‌ಗೆ ಬೆದರಿಕೆ ಹಾಕಿದ್ದ. ಈ ಬೆಳವಣಿಗೆಯ ಬಳಿಕ ಸಚಿವ ಜಮೀರ್ ಅಹಮ್ಮದ್ ಅವರು ರೌಡಿ ನಾಗರಾಜ ಮತ್ತು ವೆಂಕಟೇಶ್‌ನನ್ನು ಕರೆಸಿ ರಾಜಿ ಪಂಚಾಯ್ತಿ ಮಾಡಿದ್ದರು. ಆ ನಂತರವೂ ನಾಗರಾಜ, ವೆಂಕಟೇಶ್‌ನ ವಿರುದ್ಧ ದ್ವೇಷ ಕಾರುತ್ತಿದ್ದ. ಬ್ಯಾಟರಾಯನಪುರದ ವೆಂಕಟೇಶ್, ಹೂವಿನ ವ್ಯಾಪಾರ ಮಾಡುತ್ತಾನೆ. ವೆಂಕಟೇಶ್, ಚಾಮರಾಜಪೇಟೆಯ ಸ್ಮಶಾನಕ್ಕೆ ಮರದ ಕಟ್ಟಿಗೆ ಪೂರೈಸುವ ಟೆಂಡರ್ ಪಡೆದಿದ್ದ. ಈ ಟೆಂಡರ್ ತನಗೆ ಬಿಟ್ಟುಕೊಡಬೇಕೆಂದು ನಾಗರಾಜ, ವೆಂಕಟೇಶ್‌ಗೆ ತಾಕೀತು ಮಾಡಿದ್ದ. ಈ ವಿಚಾರಕ್ಕೆ ಅವರ ನಡುವೆ ಜಗಳವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೆಂಕಟೇಶ್, ಮರದ ಕಟ್ಟಿಗೆ ಟೆಂಡರ್ ಬಿಟ್ಟುಕೊಡಲು ಒಪ್ಪಿರಲಿಲ್ಲ. ಈ ಕಾರಣಕ್ಕೆ ನಾಗರಾಜ, ವೆಂಕಟೇಶ್‌ನ ಮೇಲೆ ಹಗೆ ಸಾಧಿಸುತ್ತಿದ್ದ. ನಾಗರಾಜ ಬೆದರಿಕೆ ಹಾಕಿದ್ದಂತೆ ತನ್ನನ್ನು ಕೊಲೆ ಮಾಡಬಹುದೆಂಬ ಆತಂಕದಲ್ಲಿ ವೆಂಕಟೇಶ್‌ನೇ ಆತನನ್ನು ಕೊಲೆ ಮಾಡಿಸಿರುವ ಶಂಕೆಯಿದೆ. ಆದರೆ, ಈವರೆಗಿನ ತನಿಖೆಯಲ್ಲಿ ಈ ಸಂಗತಿ ಧೃಡಪಟ್ಟಿಲ್ಲ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ನಾಗರಾಜ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಬ್ಯಾಟರಾಯನಪುರ ಠಾಣೆಯ ರೌಡಿಪಟ್ಟಿಯಲ್ಲಿ ಆತನ ಹೆಸರಿತ್ತು. ನಾಗರಾಜನ ವಿರುದ್ಧ ಕೊಲೆ, ಡಕಾಯಿತಿಗೆ ಸಂಚು, ದರೋಡೆ ಸೇರಿದಂತೆ ಏಳೆಂಟು ಪ್ರಕರಣ ದಾಖಲಾಗಿದ್ದವು. ಮುತ್ತುರಾಯನಗರದಲ್ಲಿ ಬುಧವಾರ ರಾತ್ರಿ ನಾಗರಾಜನನ್ನು ದುಷ್ಕರ್ಮಿಗಳು ಮಾರಕಾಸಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net