ತಮ್ಮದೇ ಪಕ್ಷದ ಶಾಸಕನ ಬಹಿರಂಗ ಪತ್ರಕ್ಕೆ ಸಚಿವರ ತೀವ್ರ ಅಸಮಾಧಾನ

Dinesh gundoo rao
Published on

ಬೆಂಗಳೂರು: ಕ್ಷೇತ್ರದ ಸಮಸ್ಯೆಗೆ ಸ್ಪಂದಿಸದ ತಮ್ಮ ಆಪ್ತ ಕಾರ್ಯದರ್ಶಿ ವಿರುದ್ಧ ಹಕ್ಕುಬಾಧ್ಯತಾ ಸಮಿತಿಗೆ ಕ್ರಮಕೈಗೊಳ್ಳಲು ಸ್ಪೀಕರ್ ಬಳಿ ಕೋರಿಕೆ ಇಟ್ಟ ತಮ್ಮದೇ ಪಕ್ಷದ ಬೀಳಗಿ ಶಾಸಕ ಜೆ.ಟಿ ಪಾಟೀಲ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಬಹಿರಂಗವಾಗಿ ಪತ್ರ ಬರೆದಿರುವುದು ತಪ್ಪು. ಏನೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಬಳಿ ಬಂದು ಚರ್ಚಿಸಬಹುದಾಗಿತ್ತು ಎಂದು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಆಪ್ತ ಕಾರ್ಯದರ್ಶಿ ಬಗ್ಗೆ ಶಾಸಕರು ಪತ್ರ ಬರೆದಿದ್ದಾರೆ. ಆದರೆ, ಶಾಸಕರು ನನ್ನ ಬಳಿಯೇ ಚರ್ಚೆ ಮಾಡಬಹುದಿತ್ತು. ಅವರೇನು ನನ್ನ ಬಳಿ ಮಾತನಾಡಿಲ್ಲ. ಅಷ್ಟಕ್ಕೂ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಬಹಿರಂಗವಾಗಿ ಪತ್ರ ಬರೆದಿದ್ದು ಮಾತ್ರ ಸರಿಯಲ್ಲ ಎಂದು ಹೇಳಿದರು.

ಏನಾದರೂ ಇದ್ದರೆ ನನ್ನ ಬಳಿಯೇ ಮಾತನಾಡಬಹುದಿತ್ತು. ಜೆ.ಟಿ ಪಾಟೀಲ್ ಹೇಳಿದ ಬಹಳಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದೇವೆ. ಅಧಿಕಾರಿಯಿಂದ ಇನ್ನಷ್ಟು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ.ಇದಾಯತುಲ್ಲಾ ಅವರು ಕ್ಷೇತ್ರದ ಸಮಸ್ಯೆ ಹೇಳಿದರೂ ಸ್ಪಂದನೆ ನೀಡಲಿಲ್ಲ. ಜನ ಪ್ರತಿನಿಧಿಗಳ ಜತೆ ಸ್ಪಂದನೆ ಇಲ್ಲ. ಇಲಾಖೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ಕೊಡುವುದಿಲ್ಲ. ಇವರ ವರ್ತನೆ ಧಿಮಾಕು, ಅತಿ ಒರಟುತನದಿಂದ ಕೂಡಿದೆ. ನನ್ನ ಮತ ಕ್ಷೇತ್ರದ ಕೆಲಸಕ್ಕೆ ತೊಂದರೆಯಾಗಿರುವುದರಿಂದ ಈ ಅಧಿಕಾರ ಮೇಲೆ ಹಕ್ಕು ಬಾಧ್ಯತಾ ಸಮಿತಿಗೆ ಕ್ರಮಕೈಗೊಳ್ಳಲು ಶಿಾರಸು ಮಾಡುವಂತೆ ಜಿ.ಟಿ ಪಾಟೀಲ ಅವರು ಸ್ಪೀಕರ್‌ಗೆ ಪತ್ರ ಬರೆದು ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು. ಈ ಬೆಳವಣಿಗೆ ಸರ್ಕಾರಕ್ಕೆ ಹಾಗೂ ಆಡಳಿತ ಪಕ್ಷಕ್ಕೆ ಮುಜುಗರ ತಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net