ಜನರ ಪ್ರಶ್ನೆಗಳಿಗೆ ಸಚಿವರ ಉತ್ತರ

page 7 5
Published on

* ಪ್ಯಾರಾಮೆಡಿಕಲ್ ಓದಿರುವವರನ್ನು ನೇಮಕಾತಿ ಮಾಡಿಕೊಳ್ಳಬೇಕು. ಇದಕ್ಕೆ ಆರ್ಥಿಕ ಅನುಮೋದನೆ ಬಾಕಿ ಉಳಿದಿದ್ದು, ಬೇಗ ಅನುಮೋದನೆ ತೆಗೆದುಕೊಳ್ಳಿ.

| ಬಸವರಾಜ್

-1,124 ಹುದ್ದೆಗಳನ್ನು ನಿಮಗಾಗಿಯೇ ಮೀಸಲಿಟ್ಟಿದ್ದೇವೆ. ಇದಕ್ಕೆ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅನುಮತಿ ಸಿಕ್ಕ ತಕ್ಷಣ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು.

* ಆಯುಷ್ ಮತ್ತು ಅಲೋಪಥಿ ವೈದ್ಯರ ನಡುವೆ ಇರುವ ವೇತನ ಸೇರಿ ಇತರ ತಾರತಮ್ಯ ಸರಿಪಡಿಸಬೇಕು. ಪ್ಯಾರಾಸಿಟಮಲ್ ಮಾತ್ರೆಗಳನ್ನು ರೋಗಿಗೆ ನೀಡುವ ಅಧಿಕಾರವನ್ನು ಆಯುಷ್ ವೈದ್ಯರಿಗೂ ನೀಡಬೇಕು.

| ಮಹಾವೀರ್ ಹಾವೇರಿ

- ಆಯುಷ್ ವೈದ್ಯರನ್ನು ಎಂದಿಗೂ ಕಡೆಗಣನೆ ಮಾಡಿಲ್ಲ. ನಿಮ್ಮ ವೇತನ ತಾರತಮ್ಯವನ್ನು ಸಾಧ್ಯವಾದಷ್ಟು ಬೇಗ ಸರಿ ಪಡಿಸುತ್ತೇನೆ.

* ನಾನು ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನಮಗೂ ಜೀವ ವಿಮೆ ಕೊಡಿ.

| ಉಮೇಶ್ ಬೀದರ್

- ನೀವು ಕರೊನಾ ವಾರಿಯರ್ಸ್ ಆಗಿರುವುದರಿಂದ ನಿಮಗೂ 30 ಲಕ್ಷ ರೂ. ಜೀವ ವಿಮೆ ಇದೆ.

* ಕರೊನಾ ನಿಯಂತ್ರಿಸಬೇಕಾದಲ್ಲಿ ಎಲ್ಲರ ಮನೆಗಳಿಗೂ ಹೋಗಿ ಕರೊನಾ ಪರೀಕ್ಷೆ ನಡೆಸಿ.

| ಪ್ರಶಾಂತ್ ಸಂಡೂರು

- ಈಗಾಗಲೆ ಕೆಂಪು ವಲಯಗಳಲ್ಲಿರುವ ಮನೆಗಳಿಗೆ ಹೋಗಿ ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಿತ್ತಳೆ ವಲಯಗಳಲ್ಲೂ ಪರೀಕ್ಷೆ ನಡೆಸಲಾಗುತ್ತದೆ.

* ನಾವು ಮೇದಾರ ಸಮುದಾಯದವರು. ಕರೊನಾದಿಂದ ನಮ್ಮ ಕಸುಬು ನಿಂತಿದೆ. ನಮಗೂ ಸರ್ಕಾರದಿಂದ ಸಹಾಯಧನ ಕೊಡಿಸಿ.

| ಗಂಗಾಧರ್ ರಾಣೆಬೆನ್ನೂರು

- ರಾಜ್ಯ ಸರ್ಕಾರ ಎರಡನೇ ಪ್ಯಾಕೇಜ್​ನಲ್ಲಿ ನಿಮ್ಮ ಸಮುದಾಯವನ್ನು ಸೇರ್ಪಡೆ ಮಾಡುವ ಆಲೋಚನೆಯಲ್ಲಿದೆ. ಒಮ್ಮೆ ನಾನೂ ಸಿಎಂಗೆ ಮನವಿ ನೀಡುತ್ತೇನೆ.

* ನಾವು ಎನ್​ಎಚ್​ಎಂ ವ್ಯಾಪ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸವನ್ನು ಕಾಯಂ ಮಾಡಿ.

| ಕಾವ್ಯಾ ಮೈಸೂರು

- ಹಗಲಿರುಳು ಕೆಲಸ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಉದ್ಯೋಗ ಕಾಯಂ ಮಾಡುವ ಬಗ್ಗೆ ಆಲೋಚನೆ ನಡೆಸುತ್ತೇನೆ.

* ಕರೊನಾ ಪರೀಕ್ಷೆಯನ್ನು ಸರ್ಕಾರ ಉಚಿತವಾಗಿ ಮಾಡುತ್ತಿರುವುದರಿಂದ ಜನರಿಗೆ ಗಂಭೀರತೆ ಅರ್ಥವಾಗುತ್ತಿಲ್ಲ. ಇದಕ್ಕೂ ಹಣ ನಿಗದಿ ಮಾಡಿ.

| ಹನುಮಂತ ಬೆಳಗಾವಿ

- ಸದ್ಯ ರಾಜ್ಯವನ್ನು ಕರೊನಾದಿಂದ ಮುಕ್ತ ಮಾಡಬೇಕು. ಜನರಿಗೆ ಹರಡದಂತೆ ತಡೆಯಬೇಕು. ಇದಷ್ಟೇ ನಮ್ಮ ಕೆಲಸ. ಇದರಿಂದ ಲಾಭ ಮಾಡುವುದಕ್ಕೆ ಸಾಧ್ಯವಿಲ್ಲ.

* ನಾನು ಕಮ್ಯುನಿಟಿ ಹೆಲ್ತ್ ಅಧಿಕಾರಿಯಾಗಿದ್ದೇನೆ. ನಮಗೆ ಸಂಬಳ ನೀಡುತ್ತಿಲ್ಲ.

| ಸುನೀಲ್ ವಿಜಯಪುರ

- ಆರು ತಿಂಗಳವರೆಗೂ ತರಬೇತಿ ಇರುವುದರಿಂದ ಈ ಸಮಯದ ಸಂಬಳವನ್ನು ತರಬೇತಿ ನಂತರ ನೀಡಲಾಗುತ್ತದೆ.

* ನಾವು ರೈತರು, ನಮ್ಮನ್ನು ಆಸ್ಪತ್ರೆಯಲ್ಲಿ ಗೌರವದಿಂದ ಕಾಣುವುದಿಲ್ಲ. ಸರಿಯಾದ ಚಿಕಿತ್ಸೆ ನೀಡುವುದಿಲ್ಲ.

| ಪ್ರಭು ರಾಯಚೂರು

- ಎಲ್ಲ ರೋಗಿಗಳನ್ನು ವೈದ್ಯರು ಮತ್ತು ಅಲ್ಲಿನ ಸಿಬ್ಬಂದಿ ಗೌರವದಿಂದ ಕಾಣಬೇಕು. ಅಲ್ಲಿನ ಅಧಿಕಾರಿಗಳಿಗೆ ಬುದ್ದಿ ಹೇಳುತ್ತೇನೆ.

* ಕರೊನಾ ಅರಿವು ಮೂಡಿಸುವ ಬಗ್ಗೆ ಹೆಚ್ಚಿನ ಜಾಹೀರಾತು ನೀಡಬೇಕು.

| ವಾಸುದೇವ್ ಶಿರಸಿ

- ಈಗಾಗಲೆ ನಾವು ಸಾಕಷ್ಟು ಜಾಹೀರಾತು ನೀಡುತ್ತಿದ್ದೇವೆ. ಪತ್ರಿಕೆ ಮತ್ತು ಟಿ.ವಿ. ಎರಡರಲ್ಲೂ ಬಿತ್ತರವಾಗುತ್ತಿದೆ. ಮತ್ತಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.

* ಬೀದರ್​ನಲ್ಲಿ ಕರೊನಾ ಸೋಂಕಿತರಿದ್ದರೂ, ಲ್ಯಾಬ್​ಗಳಿಲ್ಲ. ನಮ್ಮ ಜಿಲ್ಲೆಯಲ್ಲೂ ಲ್ಯಾಬ್ ತೆರೆಯಿರಿ.

| ಗಜಾನನ್ ಬೀದರ್

- ಸದ್ಯ ರಾಜ್ಯದಲ್ಲಿ 33 ಕರೊನಾ ಪರೀಕ್ಷೆ ಲ್ಯಾಬ್​ಗಳಿವೆ. ನಿಮ್ಮ ಜಿಲ್ಲೆಯಲ್ಲೊಂದು ಲ್ಯಾಬ್ ತೆರೆಯಲು ಅನುಮತಿ ನಿರೀಕ್ಷಿಸುತ್ತಿದ್ದು, ಮುಂದಿನ ಒಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ.

* ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕರೊನಾ ಸೋಂಕಿತರು ಗುಣಮುಖರಾಗುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಕಾರಣವೇನು?

| ಸಂತೋಷ್ ಕಲಬುರಗಿ

-ನಾವು ಎಲ್ಲ ಕಡೆ ಒಂದೇ ರೀತಿ ಚಿಕಿತ್ಸೆ ನೀಡುತ್ತಿದ್ದೇವೆ. ಯಾರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆಯೋ ಅವರು ಬೇಗ ಗುಣಮುಖರಾಗುತ್ತಾರೆ.

* ನಾವು ಆರೋಗ್ಯ ಇಲಾಖೆ ಅಧೀನದಲ್ಲಿರುವ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್ ಗಳಾಗಿದ್ದೇವೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಆಸ್ಪತ್ರೆಯಲ್ಲಿನ ನರ್ಸ್​ಗಳಿಗಿಂತ ನಮಗೆ ಕಡಿಮೆ ವೇತನ ಇದೆ.

| ರೇಣುಕಾ ರಾಯಚೂರು

- ಸ್ವಾಯತ್ತ ಆಸ್ಪತ್ರೆಗಳಿಗೆ ಅನುದಾನ ಹೆಚ್ಚಾಗಿ ಬರುವುದರಿಂದ ಅಲ್ಲಿನ ಸಿಬ್ಬಂದಿಗೆ ವೇತನ ಹೆಚ್ಚಾಗಿರುತ್ತದೆ. ಈ ತಾರತಮ್ಯ ಸರಿ ಪಡಿಸುವಂತೆ ಸಿಎಂ ಗಮನಕ್ಕೆ ತರುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net