ಗಣಿ ಗುತ್ತಿಗೆ ನವೀಕರಣ; ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪ್ರಯತ್ನ: CM ಸಿದ್ದರಾಮಯ್ಯ ಕಿಡಿ

dk - 2025-04-09T213019.722
Published on

ಬೆಂಗಳೂರು: ಗಣಿ ಗುತ್ತಿಗೆ ನವೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಹೇಳಿದ್ದಾರೆ.

ಇಂತಹ ಅಪ ಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಸಿಎಂ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಈ ಎಲ್ಲಾ 8 ಪ್ರಕರಣಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ನಷ್ಟವಾಗಲಿಲ್ಲ. ಈ ಅವಧಿಯಲ್ಲಿ ಒಂದು ಹಿಡಿಯಷ್ಟೂ ಅದಿರು ತೆಗೆದಿಲ್ಲ. ಈ ಕುರಿತಂತೆ ಈ ಹಿಂದೆ ಕೂಡ ವಿರೋಧ ಪಕ್ಷಗಳವರು ಹಾಗೂ ಕೆಲವು ವ್ಯಕ್ತಿಗಳು ಹಲವು ಸಂಸ್ಥೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ದೂರುಗಳಲ್ಲಿ ಯಾವುದೇ ಹುರುಳಿಲ್ಲವೆಂದು ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ವಿರೋಧ ಪಕ್ಷಗಳವರು ಸದರಿ ವಿಚಾರವನ್ನು ಸದನದಲ್ಲೂ ಪ್ರಶ್ನಿಸಿದ್ದರು. ಈಗಿನ ಕೇಂದ್ರ ಸಚಿವ ಕುಮಾರಸ್ವಾಮಿ ಈ ಹಿಂದೆ(14.01.2018) ಪತ್ರಿಕಾ ಗೋಷ್ಠಿಯನ್ನೂ ಮಾಡಿದ್ದರು. ಆದರೆ, ಈ ಯಾವುದೇ ಪ್ರಕರಣಗಳಲ್ಲಿ ಹುರುಳೆ ಇರಲಿಲ್ಲ. ಏಕೆಂದರೆ, ಈ ಎಲ್ಲಾ 8 ಪ್ರಕರಣಗಳನ್ನು ಹೊಸ ಸುಗ್ರೀವಾಜ್ಞೆಯ ನಿಯಮಾವಳಿಗಳಿಗೆ ಅನುಗುಣವಾಗಿ ಕ್ರಮವಹಿಸಲಾಗಿದೆ. ಅವಧಿ ಮುಗಿದ ಗಣಿ ಗುತ್ತಿಗೆಗಳನ್ನು ನಂತರ ನಿಯಮಾನುಸಾರ ಹರಾಜಿಗೆ ಒಳಪಡಿಸಿ ವಿಲೇ ಮಾಡಲಾಗಿದೆ. ಸುಮಾರು 10 ವರ್ಷಗಳ ನಂತರ ಈ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಜಗಿಯಲು ಪ್ರಾರಂಭಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಏನಿದು ಪ್ರಕರಣ..?

2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಿದ್ದರಾಮಯ್ಯ 8 ಗಣಿ ಗುತ್ತಿಗೆ ನವೀಕರಣ ಮಾಡಿದ್ದರು. ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪೆನಿಗಳ ಲೈಸೆನ್ಸ್ ಕೂಡ ನವೀಕರಣ ಮಾಡಲಾಗಿತ್ತು. ಲೈಸೆನ್ಸ್ ನವೀಕರಣ ಮಾಡಿಕೊಟ್ಟಿದ್ದಕ್ಕೆ ಸಿದ್ದರಾಮಯ್ಯ ಸುಮಾರು 500 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಿಎಂ ಕಿಕ್ ಬ್ಯಾಕ್ ಪಡೆದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವರು ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್​​ಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net