

ಸಿಕ್ಕಿಂ: ಸಿಕ್ಕಿಂನ ರಾಣಿಪೂಲ್‌ನಲ್ಲಿ ದಾರುಣ ಘಟನೆಯೊಂದು ಸಂಭವಿಸಿದ್ದು, ಜಾತ್ರೆ ನಡೆಯುತ್ತಿದ್ದ ಮೈದಾನದ ಬಳಿ ನಿಂತಿದ್ದ ಮೂರು ಕಾರುಗಳಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಭಯಾನಕ ಘಟನೆಯು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ನಿಂತಿದ್ದ ಕಾರುಗಳಿಗೆ ರಭಸವಾಗಿ ಡಿಕ್ಕಿ ಹೊಡೆದ ಹಾಲಿನ ಟ್ಯಾಂಕರ್ ಜಾತ್ರೆಯ ಮೈದಾನದೊಳಗೆ ಪ್ರವೇಶಿಸಿದೆ. ದಿಢೀರ್ ಎಂಬಂತೆ ನುಗ್ಗಿದ ಲಾರಿಯಿಂದ ತಪ್ಪಿಸಿಕೊಳ್ಳಲಾಗದೆ ಹಲವರು ವಾಹನಗಳ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಲಿನ ಟ್ಯಾಂಕರ್ನ ಬ್ರೇಕ್ ವೈಫಲ್ಯದಿಂದ ಈ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ಗಾಯಗೊಂಡವರನ್ನು ತಕ್ಷಣವೇ ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).