ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್​ಗೆ 100 ರೂ! ಇದು ಹೊಸ ರೀತಿಯ ಪ್ರತಿಭಟನೆ

milk
Published on

ಚಂಡೀಗಢ: ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡುಬರುತ್ತಿದೆ. ಪ್ರತಿ ಮೂಲೆಯಲ್ಲೂ ಜನರು ಈ ಬೆಳವಣಿಗೆಯನ್ನು ಖಂಡಿಸಿ ಹೋರಾಟ ಮಾಡಲಾರಂಭಿಸಿದ್ದಾರೆ. ಆದರೆ ಹರಿಯಾಣದ ಹಿಸಾರ್​ನಲ್ಲಿ ಬೇರೆಯದ್ದೇ ರೀತಿಯಲ್ಲಿ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ.

ಹಿಸಾರ್​ನ ರೈತರು ಹೊಸ ರೂಪದ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಇಂಧನ ಬೆಲೆ ಇಳಿಸುವವರೆಗೆ ಅವರು ಡೇರಿಗೆ ಕೊಡುವ ಹಾಲಿನ ಮೊತ್ತ ಲೀಟರ್​ಗೆ 100 ರೂಪಾಯಿಯಷ್ಟಾಗಲಿದೆ. ಮಾರ್ಚ್​ 1ರಿಂದಲೇ ಈ ದರ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಕುರಿತಾಗಿ ರೈತ ಮಹಾಪಂಚಾಯತ್​ನಲ್ಲಿ ರೈತರಿಗೆ ಸೂಚನೆ ನೀಡಲಾಗಿದೆ.

ರೈತ ಮುಖಂಡ ರಾಮ್ನಿವಾಸ್​ ನೇತೃತ್ವದಲ್ಲಿ ರೈತ ಮಹಾಪಂಚಾಯತ್​ ಸಭೆ ನಡೆಸಲಾಗಿದೆ. ಆ ವೇಳೆ ಇಂತದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಎಂದಿನಂತೆ ಲೀಟರ್​ಗೆ 55ರಿಂದ 60 ರೂಪಾಯಿ ಬೆಲೆಯಲ್ಲಿ ಹಾಲು ಮಾರಾಟ ಮಾಡಲಾಗುವುದು. ಆದರೆ ಡೇರಿಗೆ ಮಾತ್ರ ಹಾಲಿನ ದರವನ್ನು ಲೀಟರ್​ಗೆ 100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net