

ರಷ್ಯಾ-ಯೂಕ್ರೇನ್ ಯುದ್ಧ ಇನ್ನೂ ಮುಗಿದಿಲ್ಲ. ಈ ನಡುವೆ ನ್ಯಾಟೋದ ರಕ್ಷಣಾ ವೆಚ್ಚವನ್ನು ಶೇಕಡ 5ರಷ್ಟು ಹೆಚ್ಚಳ ಮಾಡಬೇಕು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ. ಇದಕ್ಕೆ ಮೈತ್ರಿಕೂಟದ ಸದಸ್ಯ ರಾಷ್ಟ್ರಗಳು ಮಣಿದಿವೆ. ಮಾತ್ರವಲ್ಲ, ವಿಶ್ವದ ಬಹಳಷ್ಟು ದೇಶಗಳು ಬಜೆಟ್ನ ನಿರ್ದಿಷ್ಟ ಪಾಲನ್ನು ರಕ್ಷಣಾ ವೆಚ್ಚಕ್ಕಾಗಿ ಮೀಸಲಿಡುತ್ತಿವೆ. ಭಾರತವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿ ವರ್ಷವೂ ಬಜೆಟ್ ಮೊತ್ತ ಏರಿಸುತ್ತಿದೆ. ದೇಶೀಯವಾಗಿ ಯುದ್ಧ ವಿಮಾನಗಳ ತಯಾರಿಕೆಯೊಂದಿಗೆ ಅತ್ಯಾಧುನಿಕ ವಿಮಾನಗಳನ್ನು ಫ್ರಾನ್ಸ್, ರಷ್ಯಾದಿಂದಲೂ ಖರೀದಿಸುತ್ತಿದೆ. ಈ ರಕ್ಷಣಾ ವೆಚ್ಚದ ಮೇಲೊಂದು ನೋಟ ಇಲ್ಲಿದೆ.
ರಾಮಾಯಣ, ಮಹಾಭಾರತಗಳಿಗೆ ಸಾಕ್ಷಿಯಾಗಿರುವ ದೇಶ ಭಾರತ. ಹೀಗಾಗಿ, ಯುದ್ಧದ ಮಹತ್ವವನ್ನು ನಮಗಿಂತ ಚೆನ್ನಾಗಿ ಅರಿಯಲು ಯಾರಿಗೆ ತಾನೆ ಸಾಧ್ಯ? ಭಾರತೀಯರು ಆಕ್ರಮಣಕಾರಿ ಅಲ್ಲ. ಆದರೆ, ದೇಶದ ರಕ್ಷಣೆಯ ವಿಚಾರ ಬಂದರೆ ಎಲ್ಲದಕ್ಕೂ ಸಿದ್ಧ ಎಂಬುದನ್ನು ಈಗಾಗಲೇ ಜಗತ್ತಿಗೆ ತೋರಿಸಿ ಆಗಿದೆ. ಪ್ರಸ್ತುತ ಭೂ ರಾಜಕೀಯ ಸನ್ನಿವೇಶದಲ್ಲಿ ಜಾಗತಿಕವಾಗಿ ಯುದ್ಧದ ವ್ಯಾಖ್ಯಾನವೇ ಬದಲಾಗುತ್ತಿದೆ. ಇದಕ್ಕೆ ತಕ್ಕಂತೆ ಭಾರತೀಯ ಸಶಸ್ತ್ರ ಪಡೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿವೆ. ‘ಶಾಂತಿಯನ್ನು ಕಾಪಾಡ ಬೇಕು ಎಂದರೆ ನಾವು ಯುದ್ಧಕ್ಕೆ ಸಿದ್ಧವಾಗಿರಬೇಕು’- ಇದು ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರ ಮಾತು. ಇದನ್ನು ಅಂದಿನಿಂದ ಅಮೆರಿಕ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದೆ. ರಕ್ಷಣಾ ವಲಯಕ್ಕೆ ಅವರು ಮಾಡುವ ಖರ್ಚು ಇದಕ್ಕೆ ಸಾಕ್ಷಿ.
ಭಾರತದ ಬಲ: ಆತ್ಮರಕ್ಷಣೆಯ ಅರ್ಥವನ್ನು ಭಾರತ ಸರಿಯಾಗಿ ಅರಿತಿರುವುದರಿಂದಲೇ 2025-26ರ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಸಚಿವಾಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ರೂ. ಹಂಚಿಕೆಯಾಗಿದೆ. ಕಳೆದ ಹಣಕಾಸು ವರ್ಷಕ್ಕಿಂತ ಶೇಕಡ 9.53ರಷ್ಟು ಹೆಚ್ಚಾಗಿದೆ. ಇದರಲ್ಲಿ ಸಶಸ್ತ್ರ ಪಡೆಗಳಿಗೆ 1.80 ಲಕ್ಷ ಕೋಟಿ ರೂ. ನೀಡಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್ಡಿಒ) 2025-26ರ ಹಣಕಾಸು ವರ್ಷದಲ್ಲಿ 26.81 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.12.41ರಷ್ಟು ಹೆಚ್ಚು. ಪ್ರಸ್ತುತ ಸನ್ನಿವೇಶದಲ್ಲಿ ಭಾರತ ಮಾತ್ರ ರಕ್ಷಣೆಗೆ ಇಷ್ಟೊಂದು ಖರ್ಚು ಮಾಡುತ್ತಿಲ್ಲ. ಮಿಲಿಟರಿಗಾಗಿ ಹೆಚ್ಚು ಖರ್ಚು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ, ರಷ್ಯಾ, ಜರ್ಮನಿ ದೇಶಗಳು ರಕ್ಷಣಾ ವಲಯಕ್ಕೆ ಹಣವನ್ನು ನೀರಿನಂತೆ ಹರಿಸುತ್ತವೆ. 2024ರಲ್ಲಿ ಜಗತ್ತಿನ ಎಲ್ಲ ದೇಶಗಳು ಮಿಲಿಟರಿಗಾಗಿ ಮಾಡಿರುವ ವೆಚ್ಚ ಬರೋಬ್ಬರಿ 2.7 ಟ್ರಿಲಿಯನ್ ಡಾಲರ್ (2.7 ಲಕ್ಷ ಕೋಟಿ ರೂ.). ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಲೇ ಇದೆ.
ಜಾಗತಿಕವಾಗಿ ಮಾಡಲಾಗುವ ಮಿಲಿಟರಿ ವೆಚ್ಚದಲ್ಲಿ ಅಮೆರಿಕ ನಿರ್ವಿವಾದಿತ ನಾಯಕ. 2024ರಲ್ಲಿ ಅಂದಾಜು 997 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇದು ಒಟ್ಟು ಜಾಗತಿಕ ಮೊತ್ತದ ಶೇ. 37ರಷ್ಟಿದೆ. ಅಮೆರಿಕದ ನಂತರ ಚೀನಾ ಎರಡನೇ ಸ್ಥಾನ ಹೊಂದಿದೆ. ತನ್ನ ರಕ್ಷಣೆಗೆ ಅಂದಾಜು 314 ಶತಕೋಟಿ ಡಾಲರ್ ಖರ್ಚು ಮಾಡಿದೆ. ಕಳೆದೊಂದು ದಶಕದಲ್ಲಿ ಚೀನಾ ರಕ್ಷಣಾವಲಯದ ಬಜೆಟ್ ಅನ್ನು ದ್ವಿಗುಣಗೊಳಿಸಿದೆ. ಯೂಕ್ರೇನ್ನೊಂದಿಗೆ ದೀರ್ಘಕಾಲದ ಸಂಘರ್ಷದಲ್ಲಿ ಸಿಲುಕಿರುವ ರಷ್ಯಾ, ತನ್ನ ಮಿಲಿಟರಿ ವೆಚ್ಚದಲ್ಲಿ ಶೇ.38ರಷ್ಟು ಹೆಚ್ಚಳವನ್ನು ಮಾಡಿದ್ದು, ಸುಮಾರು 149 ಶತಕೋಟಿ ಡಾಲರ್ ದಾಟಿದೆ. ನಂತರದ ಸ್ಥಾನಗಳಲ್ಲಿ ಜರ್ಮನಿ, ಭಾರತ, ಇಂಗ್ಲೆಂಡ್, ಸೌದಿ ಅರೇಬಿಯಾ, ಯೂಕ್ರೇನ್, ಫ್ರಾನ್ಸ್ ಹಾಗೂ ಜಪಾನ್ ದೇಶಗಳಿವೆ.
ಭಾರತೀಯ ಸೇನೆ ಎದುರಿಸುತ್ತಿರುವ ಸವಾಲುಗಳು ಬಹುಮುಖಿಯಾಗಿವೆ. ಭೂ ರಾಜಕೀಯ ಉದ್ವಿಗ್ನತೆಗಳು ಒಂದೆಡೆಯಾದರೆ, ಮತ್ತೊಂದೆಡೆ ಆಂತರಿಕ ಭದ್ರತಾ ಬೆದರಿಕೆಗಳು, ಆಧುನಿಕ ತಂತ್ರಜ್ಞಾನದ ಕೊರತೆಯ ಸಮಸ್ಯೆಗಳು ಕಾಡುತ್ತಿವೆ. ಆಂತರಿಕ ಮತ್ತು ಬಾಹ್ಯ ಬೆದರಿಕೆ: ಭಾರತವು ನೆರೆಯ ರಾಷ್ಟ್ರಗಳೊಂದಿಗೆ ವಿಶೇಷವಾಗಿ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸಂಕೀರ್ಣ ಮತ್ತು ಆಗಾಗ ಪ್ರತಿಕೂಲ ಸಂಬಂಧಗಳನ್ನು ಎದುರಿಸುತ್ತಲೇ ಇದೆ. ಇದರಲ್ಲಿ ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಮತ್ತು ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ನಡೆಯುತ್ತಿರುವ ಗಡಿ ವಿವಾದಗಳು ಸೇರಿವೆ. ಈ ಸಮಸ್ಯೆಗಳ ಮೇಲೆ ಯಾವಾಗಲೂ ಒಂದು ಕಣ್ಣಿರಲೇ ಬೇಕು. ಇದಕ್ಕೆ ಗಡಿಯುದ್ದಕ್ಕೂ ಸೈನ್ಯದ ನಿಯೋಜನೆ ಅನಿವಾರ್ಯ. ಇನ್ನು ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಭಯೋತ್ಪಾದನೆ, ಈಶಾನ್ಯದಲ್ಲಿ ಪ್ರತ್ಯೇಕತಾವಾದಿ ಚಳವಳಿಗಳು ಮತ್ತು ಮಧ್ಯ ಭಾರತದಲ್ಲಿ ಎಡಪಂಥೀಯ ಉಗ್ರವಾದ (ನಕ್ಸಲಿಸಂ) ಪ್ರಮುಖ ಸವಾಲುಗಳು.
ಭಾರತ ಬಳಸುವ ಬಹುಪಾಲು ಉಪಕರಣಗಳು ಮತ್ತು ಯುದ್ಧ ಸಂಬಂಧಿ ಸಾಮಗ್ರಿಗಳು ಹಳೆಯದಾಗಿವೆ. ಇವುಗಳಿಗೆ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ. ಫೈಟರ್ ಜೆಟ್ಗಳು, ಜಲಾಂತರ್ಗಾಮಿ ನೌಕೆಗಳು, ಫಿರಂಗಿ ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತಷ್ಟು ಸುಧಾರಿಸಿದರೆ ಜಾಗತಿಕ ರಕ್ಷಣಾ ವಲಯದಲ್ಲಿ ಭಾರತ ಸೂಪರ್ ಪವರ್ ಆಗುವುದು ನಿಸ್ಸಂಶಯ. ಸಾಕಷ್ಟು ಅಭಿವೃದ್ಧಿಯ ಹೊರತಾಗಿಯೂ ಭಾರತ ಉನ್ನತ ಮಟ್ಟದ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಿತಿಗಳನ್ನು ಎದುರಿಸುತ್ತಿದೆ. ಸೈಬರ್ ದಾಳಿ, ಇಲೆಕ್ಟ್ರಾನಿಕ್ ಯುದ್ಧ ನಿರ್ವಹಣೆ, ಸ್ವಾಯತ್ತ ವ್ಯವಸ್ಥೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತ ಇನ್ನಷ್ಟು ಮುಂದಡಿ ಇಡಬೇಕಿದೆ. ಈ ನಿಟ್ಟಿನಲ್ಲಿ ಹೊಸ ಯೋಜನೆಗಳು ಜೀವ ತಳೆಯುತ್ತಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ವಿದೇಶಿ ಅವಲಂಬನೆಯನ್ನು ತಗ್ಗಿಸಲು ದಿಟ್ಟ ಕ್ರಮ ಕೈಗೊಳ್ಳಬೇಕಿದೆ.
ಪ್ರಬಲ ಮಿಲಿಟರಿಯ ಆಧಾರದ ಮೇಲೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳಿವೆ. ಭಾರತವೂ ಸೇರಿದಂತೆ ಈ ದೇಶಗಳು ಅತ್ಯುತ್ತಮ ರಕ್ಷಣಾ ವ್ಯವಸ್ಥೆ, ಬಲವಾದ ಸಶಸ್ತ್ರ ಪಡೆ ಮತ್ತು ಇತ್ತೀಚಿನ ತಂತ್ರಜ್ಞಾನದಿಂದಾಗಿ ಗಮನಾರ್ಹ ಜಾಗತಿಕ ಪ್ರಭಾವ ಹೊಂದಿವೆ. ಭಾರತೀಯ ಸೇನೆ 51,37,000 ಸಿಬ್ಬಂದಿಯನ್ನು ಒಳಗೊಂಡಿದೆ. ಇದರಲ್ಲಿ 14,55,550 ಸಕ್ರಿಯ-ಕರ್ತವ್ಯ ಸದಸ್ಯರು, 25,00,000 ಮೀಸಲು ಪಡೆಗಳು ಮತ್ತು 2,50,000 ಅರೆಸೈನಿಕ ಸಿಬ್ಬಂದಿ ಸೇರಿದ್ದಾರೆ. ಭಾರತೀಯ ಸೇನೆ 2,100 ವಿಮಾನಗಳನ್ನು ನಿರ್ವಹಿಸುತ್ತದೆ. ಇದರಲ್ಲಿ 650 ಫೈಟರ್ ಜೆಟ್ಗಳು, 300 ದಾಳಿ ವಿಮಾನಗಳು ಮತ್ತು 300 ಸಾರಿಗೆ ವಿಮಾನಗಳು ಮತ್ತು 600 ಹೆಲಿಕಾಪ್ಟರ್ಗಳು ಸೇರಿವೆ. ಸುಮಾರು 4,200 ಟ್ಯಾಂಕ್ಗಳು, 22,000 ಶಸ್ತ್ರಸಜ್ಜಿತ ವಾಹನಗಳು ಮತ್ತು 2,000 ಸ್ವಯಂಚಾಲಿತ ಫಿರಂಗಿ ಘಟಕಗಳನ್ನು ಭಾರತೀಯ ಸೇನೆ ಹೊಂದಿದೆ. ನೌಕಾ ಬಲವನ್ನು ಪರಿಗಣಿಸುವುದಾದರೆ 2 ವಿಮಾನವಾಹಕ ನೌಕೆ, 10 ವಿಧ್ವಂಸಕ ನೌಕೆಗಳು ಮತ್ತು 15 ಜಲಾಂತರ್ಗಾಮಿ ನೌಕೆಗಳು ಸೇರಿದಂತೆ 295 ನೌಕಾ ಸ್ವತ್ತುಗಳಿವೆ.
ದೇಶದ ಒಟ್ಟು ಉತ್ಪನ್ನದ (ಜಿಡಿಪಿ) ಆಧಾರದ ಮೇಲೆ ರಕ್ಷಣಾ ವಲಯಕ್ಕೆ ಮಾಡುವ ವೆಚ್ಚ ಕಳೆದೊಂದು ದಶಕದಲ್ಲಿ ಶೇಕಡ 37ಕ್ಕೆ ಏರಿಕೆ ಕಂಡಿದೆ. ಜಾಗತಿಕವಾಗಿ ರಕ್ಷಣೆಗೆ ಹೆಚ್ಚಿನ ಹಣ ಖರ್ಚು ಮಾಡುವ ದೇಶ ಅಮೆರಿಕ ಆದರೂ, ತನ್ನ ಒಟ್ಟು ದೇಶೀಯ ಉತ್ಪನ್ನದ ಶೇ.34 ರಷ್ಟನ್ನು ರಕ್ಷಣೆಗೆ ವ್ಯಯಿಸುವ ಮೂಲಕ ಯೂಕ್ರೇನ್ ಮೊದಲ ಸ್ಥಾನದಲ್ಲಿದೆ. ರಷ್ಯಾದೊಂದಿಗಿನ ಯುದ್ಧ ಯೂಕ್ರೇನ್ಗೆ ನುಂಗಲಾರದ ತುತ್ತಾಗಿದೆ. ಎರಡನೇ ಸ್ಥಾನದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರವಾದ ಇಸ್ರೇಲ್ ಇದ್ದು, ಶೇ.8.80 ರಷ್ಟನ್ನು ರಕ್ಷಣೆಗೆ ವ್ಯಯಿಸುತ್ತಿದೆ. ಮೂರನೇ ಸ್ಥಾನದಲ್ಲಿ ಅಲ್ಜೀರಿಯಾ (ಶೇ.8), ನಾಲ್ಕನೇ ಸ್ಥಾನದಲ್ಲಿ ಸೌದಿ ಅರೇಬಿಯಾ (ಶೇ.7.30), ಐದನೇ ಸ್ಥಾನದಲ್ಲಿ ರಷ್ಯಾ (ಶೇ.7.1) ಇದ್ದು ನಂತರದ ಸ್ಥಾನಗಳಲಿ ಕುವೈತ್, ಪೊಲ್ಯಾಂಡ್, ಅಮೆರಿಕ ಹಾಗೂ ಗ್ರೀಸ್ ದೇಶಗಳಿವೆ. ಭಾರತ 2024ರಲ್ಲಿ ಒಟ್ಟು ದೇಶೀಯ ಉತ್ಪನ್ನದ ಶೇ.2.3ರಷ್ಟನ್ನು ರಕ್ಷಣೆಗೆ ಬಳಸಿದೆ.
ಹಿಂದಿನಿಂದಲೂ ಭಾರತ ರಕ್ಷಣಾ ಉಪಕರಣಗಳ ವಿಶ್ವದ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿದೆ. ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಭಾರತವು 1993ರಿಂದ 2022ರವರೆಗೆ ಜಾಗತಿಕವಾಗಿ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿತ್ತು. ಸಾಂಪ್ರದಾಯಿಕವಾಗಿ, ರಷ್ಯಾ ಭಾರತದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ರಕ್ಷಣಾ ಪಾಲುದಾರ ರಾಷ್ಟ್ರ. ಫೈಟರ್ ಜೆಟ್ಗಳು, ಟ್ಯಾಂಕ್ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಹೆಚ್ಚಾಗಿ ರಷ್ಯಾದಿಂದಲೇ ಪಡೆದಿದೆ. ಕಳೆದ ಕೆಲ ವರ್ಷಗಳಿಂದ ಫ್ರಾನ್ಸ್ ಕೂಡ ಪ್ರಮುಖ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ. ಫ್ರಾನ್ಸ್ ನಿಂದ ಆಮದುಗಳು ಗಮನಾರ್ಹ ಹೆಚ್ಚಳ ಕಂಡಿವೆ. ರಫೇಲ್ ಫೈಟರ್ ಜೆಟ್ಗಳು ಮತ್ತು ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆಗಳನ್ನು ಫ್ರಾನ್ಸ್ ನೀಡಿದೆ. ಭಾರತವು ಇಸ್ರೇಲ್ನಿಂದ ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು, ರಾಡಾರ್ಗಳು ಮತ್ತು ಡ್ರೋನ್ಗಳನ್ನು ಆಮದು ಮಾಡಿಕೊಳ್ಳುತ್ತದೆ. ಇನ್ನು ಅಮೆರಿಕದಿಂದ ಪೋಸಿಡಾನ್ ಕಡಲ ಗಸ್ತು ವಿಮಾನ ಮತ್ತು ಸೂಪರ್ ಹರ್ಕ್ಯುಲಸ್ನಂತಹ ಸಾರಿಗೆ ವಿಮಾನಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರಗಳೊಂದಿಗೆ ರಕ್ಷಣಾ ಪಾಲುದಾರನಾಗಿ ಉತ್ತಮ ಸಂಬಂಧ ಹೊಂದಿದೆ.