

ಬೆಂಗಳೂರು: ಉಪಸಮರದ ಗೆಲುವಿನ ಉತ್ಸಾಹದಲ್ಲಿ ಬೀಗುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಕಣ್ಣೀಗ ಸರ್ಕಾರ ವರ್ಚಸ್ಸು ಹೆಚ್ಚಿಸುವುದರತ್ತ ಕೇಂದ್ರೀಕೃತವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಸಚಿವರ ಸಾಧನೆಗಳ ಪರಾಮರ್ಶೆಗೆ ವರಿಷ್ಠರು ಮುಂದಾಗಿದ್ದು, ಸಿದ್ದರಾಮಯ್ಯ ಸಂಪುಟದ ಮಂತ್ರಿ ಮಹೋದಯರ ಎದೆಯಲ್ಲಿ ಸಣ್ಣ ನಡುಕ ಶುರುವಾಗಿದೆ. ಸಚಿವರ ಮೌಲ್ಯಮಾಪನಕ್ಕಾಗಿ ಎಐಸಿಸಿ ಕಳುಹಿಸಿರುವ ಪ್ರಶ್ನಾವಳಿಗಳನ್ನು ಕೆಪಿಸಿಸಿ ಎಲ್ಲ ಸಚಿವರ ಕಚೇರಿಗೂ ತಲುಪಿಸಿದೆ. ಈವರೆಗೆ ಇಲಾಖೆಯಲ್ಲಿ ಯಾವುದೇ ಪ್ರಗತಿ ತೋರಿಸದ ಸಚಿವರಿಗೆ ಏನು ಉತ್ತರ ನೀಡಬೇಕೆಂಬ ಪೀಕಲಾಟ ಶುರುವಾಗಿದೆ.
ರಾಜ್ಯದ ಅನೇಕ ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸಚಿವರ ಕಚೇರಿಗಳಲ್ಲೂ ಶಾಸಕರಿಗೆ ಗೌರವ ಸಿಗುವುದಿಲ್ಲವೆಂಬ ದೂರು ಸರ್ವೆ ಸಾಮಾನ್ಯವಾಗಿದೆ. ಸಚಿವರು ಇಲಾಖೆಯಲ್ಲಿ ಏನೇನು ಪ್ರಗತಿ ಸಾಧಿಸಿದ್ದಾರೆ ಎಂಬುದು ಪಕ್ಷದಲ್ಲೇ ಯಾರಿಗೂ ತಿಳಿಯುತ್ತಿಲ್ಲ. ಇದರಿಂದಾಗಿ ಸರ್ಕಾರದ ವರ್ಚಸ್ಸು ವೃದ್ಧಿಯಾಗುತ್ತಿಲ್ಲ ಎಂಬ ಅಪವಾದವಿದೆ. ಈ ಎಲ್ಲ ಗೊಂದಲ, ಗೋಜಲು ಬಗೆಹರಿಸುವುದು ವರಿಷ್ಠರ ಉದ್ದೇಶವಾಗಿದೆ.
ವಿಧಾನಸೌಧಕ್ಕೆ ಕರೆತರುವುದು: ಬಹುತೇಕ ಸಚಿವರು ವಿಧಾನಸೌಧಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಸಚಿವ ಸಂಪುಟ ಸಭೆ ಇದ್ದರಷ್ಟೇ ಸಚಿವರು ಬರುತ್ತಾರೆ. ಉಳಿದಂತೆ ವಿಧಾನಸೌಧದಲ್ಲಿ ಯಾರೂ ಇರುವುದಿಲ್ಲ. ಇದರಿಂದ ಸರ್ಕಾರದ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸಚಿವರೇ ವಿಧಾನಸೌಧಕ್ಕೆ ಬಾರದಿರುವುದರಿಂದ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಹಾಸಿಗೆ ಹಾಸಿಕೊಟ್ಟಂತೆ ಆಗಿದೆ. ಅಧಿಕಾರಿಗಳು ಯಾರ ನಿಯಂತ್ರಣಕ್ಕೂ ಸಿಗದೇ ಇರುವುದರಿಂದ ಆಡಳಿತದ ಬಿಗಿ ಕೈ ತಪು್ಪತ್ತಿದೆ. ಅದನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡು ಆಡಳಿತ ಯಂತ್ರ ಬಿಗಿ ಮಾಡುವುದು ಸಹ ವರಿಷ್ಠರ ಉದ್ದೇಶವಾಗಿದೆ. ಪರಿಸ್ಥಿತಿ ಕೈ ಮೀರಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಕಟಕ್ಕೆ ಸಿಲುಕುತ್ತದೆ ಎಂಬ ಆತಂಕದಿಂದ ಕಾಂಗ್ರೆಸ್ ವರಿಷ್ಠರು ಪರಾಮರ್ಶೆಯ ಸರ್ಕಸ್ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಕೆಲವು ತಿಂಗಳ ಹಿಂದಷ್ಟೇ ಸಚಿವರ ಸಭೆ ನಡೆಸಿದ್ದರು. ಆ ಸಂದರ್ಭದಲ್ಲಿಯೂ ಸಚಿವರಿಂದ ವಿವರ ಕೇಳಿದ್ದರು. 3-4 ಸಚಿವರು ಹೊರತುಪಡಿಸಿ ಇನ್ನುಳಿದ ಸಚಿವರು ಯಾವುದೇ ಮಾಹಿತಿ ನೀಡಿರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಕಾಂಗ್ರೆಸ್ ವರಿಷ್ಠರು ಪ್ರಶ್ನಾವಳಿ ರವಾನಿಸಿ ಮಾಹಿತಿ ಕೋರಿದ್ದಾರೆಂದು ಹಿರಿಯ ಸಚಿವರೊಬ್ಬರ ಆಪ್ತರು ಸ್ಪಷ್ಟಪಡಿಸಿದ್ದಾರೆ.
ವೇಣುಗೋಪಾಲ್ ಹಾಗೂ ಸುರ್ಜೆವಾಲಾ ಶೀಘ್ರದಲ್ಲಿಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಜ್ಯ ನಾಯಕರ ಜತೆ ರ್ಚಚಿಸಿದ ಬಳಿಕ ಸಚಿವರ ಮತ್ತೊಂದು ಸಭೆ ನಡೆಸುವ ಉದ್ದೇಶ ಹೊಂದಿದ್ದಾರೆ. ಆ ಸಭೆಯಲ್ಲಿ ಸಚಿವರಿಂದ ಬಂದಿರುವ ಪ್ರೋಗ್ರೆಸ್ ರಿಪೋರ್ಟ್ ಬಗ್ಗೆ ಚರ್ಚೆ ನಡೆಸಿ ವರಿಷ್ಠರಿಗೆ ವರದಿ ಮುಟ್ಟಿಸಲಿದ್ದಾರೆಂದು ಹೇಳಲಾಗುತ್ತಿದೆ.
ಸಚಿವರಿಗೆ ಸಲ್ಲಿಕೆಯಾಗಿರುವ ಪ್ರಶ್ನಾವಳಿಗಳಲ್ಲಿ ಕೇವಲ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಷ್ಟೇ ಇಲ್ಲ. ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನಿಡಲಾಗಿದೆ. ಸಚಿವರಾದ ನಂತರ ಇಲಾಖೆಯಲ್ಲಿ ತಂದಿರುವ ಬದಲಾವಣೆಗಳೇನು? ಜಿಲ್ಲೆಯಲ್ಲಿ ಕಾರ್ಯಕರ್ತರ ಜತೆ ಸಮನ್ವಯ ಸಾಧಿಸಲಾಗಿದೆಯೇ? ಜನಸ್ಪಂದನಾ ಸಭೆ ನಡೆಸಿರುವರೇ? ತಾಲೂಕುಗಳಿಗೆ ಭೇಟಿ ನೀಡಿದಾಗ ಸ್ವೀಕರಿಸಲಾದ ಅಹವಾಲುಗಳಿಗೆ ನೀಡಿರುವ ಸ್ಪಂದನೆ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ಸಮಿತಿಗಳಿಗೆ ನೇಮಕ, ಡಿಸಿಸಿ ಕಚೇರಿಗಳಿಗೆ ಭೇಟಿ, ಪದಾಧಿಕಾರಿಗಳ ಸಭೆ, ಸ್ವಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಯೋಜನೆಗಳು, ಬೇರೆ ಜಿಲ್ಲೆಗಳಿಗೆ ಹೋದಾಗ ಪಕ್ಷದ ಕಚೇರಿ ಭೇಟಿ, ಸ್ವಂತ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪಕ್ಷದ ಕಚೇರಿಗೆ ನಿವೇಶನ ಪಡೆಯುವುದು, ಗ್ಯಾರಂಟಿಗಳ ಅನುಷ್ಠಾನ, ಅವುಗಳ ಮೂಲಕ ಸರ್ಕಾರ ಮತ್ತು ಪಕ್ಷದ ಪರವಾಗಿ ಕೈಗೊಂಡಿರುವ ವ್ಯಾಪಕ ಪ್ರಚಾರದ ಮಾಹಿತಿಗಳೇನೆಂಬ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
ಸರ್ಕಾರಕ್ಕೆ 2 ವರ್ಷ ತುಂಬಿದ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚಿಸುವ ಉದ್ದೇಶ ವರಿಷ್ಠರಿಗೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಸಚಿವರ ಪ್ರೋಗ್ರೆಸ್ ರೆಕಾರ್ಡ್ ಅನ್ನು ಅವರಿಂದಲೇ ಪಡೆಯಲಾಗುತ್ತಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಈ ರೀತಿ ಪಡೆದ ರೆಕಾರ್ಡ್ ಜತೆಯಲ್ಲಿ ತಾವು ಸಂಗ್ರಹಿಸಿರುವ ಮಾಹಿತಿಯನ್ನು ಆಧರಿಸಿ ವರಿಷ್ಠರು ಸಂಪುಟ ಪುನಾರಚಿಸುವ ಜತೆಯಲ್ಲೇ ಸರ್ಕಾರದ ವರ್ಚಸ್ಸು ವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.