

ತಿ.ನರಸೀಪುರ: ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ ಎಂಬ ತಪ್ಪು ಮಾಹಿತಿಯಿಂದ ಗಾಬರಿಗೊಂಡ ಶಾಲಾ ಮಕ್ಕಳನ್ನು ಪಾಲಕರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂಜನಗೂಡು ತಾಲೂಕು ಸಾಲುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 34 ಮಕ್ಕಳಿದ್ದು, ಎಂದಿನಂತೆ ಗುರುವಾರ ಶಾಲೆಯಲ್ಲಿ ಬಿಸಿಯೂಟ ತಯಾರಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯಲ್ಲಿ ಬಿಸಿಯೂಟವನ್ನು ಮಕ್ಕಳು ಸೇವಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಊಟ ಮಾಡುವಾಗ ಹಲ್ಲಿ ಆಕಾರದ ತರಕಾರಿ ನೋಡಿ ಆತಂಕಗೊಂಡು ಮುಖ್ಯ ಶಿಕ್ಷಕಿ ಪುಷ್ಪಾ ಅವರಿಗೆ ತೋರಿಸಿದ್ದಾಳೆ. ಶಿಕ್ಷಕಿ ಅದನ್ನು ಪರಿಶೀಲಿಸಿದಾಗ ತರಕಾರಿಯ ಕೊನೆಯ ಭಾಗವೆಂದು ತಿಳಿಸಿದ್ದಾರೆ. ಆದರೆ, ಮಕ್ಕಳು ಗಾಬರಿಗೊಂಡು ಪಾಲಕರಿಗೆ ನಡೆದ ವಿಷಯ ಮುಟ್ಟಿಸಿದ್ದಾರೆ. ಭಯಗೊಂಡ ಪಾಲಕರು ಮಕ್ಕಳನ್ನು ಮುನ್ನೆಚ್ಚರಿಕೆಯಾಗಿ ತಿ.ನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಆಡಳಿತ ವೈದ್ಯಾಧಿಕಾರಿ ಜಗನ್ನಾಥ್ ಹಾಗೂ ಮಕ್ಕಳ ತಜ್ಞೆ ಮಾನಸಾ, ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಮುನ್ನೆಚ್ಚರಿಕೆಯಾಗಿ ತೀವ್ರ ನಿಗಾ ಘಟಕದಲ್ಲಿ ಕಾಯ್ದಿರಿಸಿದ್ದು ನಂತರ ಮನೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಪಾಲಕರು ಆತಂಕಪಡುವ ಅಗತ್ಯ ಇಲ್ಲ ಎಂದರು.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ, ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟವನ್ನು ಮಕ್ಕಳಿಗೆ ಬಡಿಸುವ ಮೊದಲು ನಾನು ಸೇವಿಸುತ್ತೇನೆ. ಇಂದು ಸಹ ನಾನೇ ಮೊದಲು ಊಟ ಮಾಡಿದ್ದೇನೆ. ಮಕ್ಕಳು ತರಕಾರಿಯ ತುಂಡೊಂದನ್ನು ಹಲ್ಲಿ ಎಂದು ಭಾವಿಸಿ ಗಾಬರಿ ಮಾಡಿಕೊಂಡಿದ್ದಾರೆ. ನನಗೆ ಅದನ್ನು ಮಕ್ಕಳು ತೋರಿಸಿದಾಗ ಪರಿಶೀಲಿಸಿ ಅದು ಹಲ್ಲಿಯಲ್ಲ ಎಂದು ಸ್ಪಷ್ಟಪಡಿಸಿದ್ದೆ. ಆದರೆ, ಪಾಲಕರು ಗಾಬರಿಯಾಗಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.