ಯೋಗವಾಸಿಷ್ಠ: ಸೂಕ್ಷ್ಮಶರೀರದ ವಿಕಾಸ

Sudina 4 Yoga Vasista
Published on

ಣುವಿನಷ್ಟು ಚಿಕ್ಕ ತೇಜಃಕಣಗಳ ರೂಪದಲ್ಲಿ ಸಮಷ್ಟಿ ಜೀವನು ತನ್ನನ್ನು ಭಾವನೆ ಮಾಡಿಕೊಂಡಿದ್ದರಿಂದ ಅತ್ಯಂತ ಪರಿಮಿತವುಳ್ಳ ವ್ಯಷ್ಟಿ ಜೀವಗಳು ಉದಯಿಸುತ್ತವೆ. ಅವುಗಳ ಸ್ವರೂಪವು ಮೂಲತಃ ವ್ಯಾಪಕವಾಗಿದ್ದರೂ ಅನಾದಿ ವಾಸನೆಗಳ ಕಾರಣದಿಂದ ತಮ್ಮನ್ನು ಅಣುವಿನಂತೆ ಚಿಕ್ಕ ಸ್ವರೂಪದಲ್ಲೇ ನೋಡಿಕೊಳ್ಳುತ್ತಿವೆ. ಹೀಗೆ ತನ್ನನ್ನು ಚಿಕ್ಕದಾಗಿ ಗುರುತಿಸಿಕೊಳ್ಳುವಿಕೆಯೇ ಜೀವಭಾವ. ಈಗ ನಾವೆಲ್ಲ ಶರೀರಭಾವದಲ್ಲಿದ್ದೇವೆ. ಆದರೆ ಮರಣಾನಂತರ ಆ ಅಣುವಿನಂಥ ಚಿಕ್ಕ ಶರೀರವೇ ಇರುತ್ತದೆ, ಅದನ್ನೇ ತಾನೆಂದು ಜೀವ ಗುರುತಿಸಿಕೊಳ್ಳುತ್ತಾನೆ. ಸಾಧನೆಯ ಮೂಲಕ ದೇಹಭಾವ ಕಳೆದುಕೊಂಡಾಗ ಜೀವಭಾವ ಉಳಿಯುತ್ತದೆ ಮತ್ತು ಸಾಧನೆ ಮುಂದುವರಿದಾಗ ಸಮಷ್ಟಿ ಜೀವಭಾವ, ಅದಕ್ಕಿಂತ ಮುಂದೆ ಬ್ರಹ್ಮಭಾವ.

ಪ್ರಕೃತದಲ್ಲಿ ವ್ಯಷ್ಟಿ ಜೀವಗಳು ಇನ್ನೂ ಸ್ಥೂಲಶರೀರವನ್ನು ಧರಿಸುವದಕ್ಕಿಂತ ಮೊದಲಿನ ಸ್ಥಿತಿಯ ಬಗ್ಗೆ ಚಿಂತನೆ ನಡೆಯುತ್ತಿದೆ. ಆಗ ಅವು ತೇಜಸ್ಸಿನ ಕಣದಂಥ ತಮ್ಮ ಸೂಕ್ಷ್ಮಶರೀರದ ಬಗ್ಗೆಯೇ ಅಭಿಮಾನ ಇಟ್ಟುಕೊಂಡಿರುತ್ತವೆ. ಇದಕ್ಕೆ ಮೂರು ದೃಷ್ಟಾಂತಗಳನ್ನು ವಸಿಷ್ಠರು ಕೊಟ್ಟಿದ್ದಾರೆ. 1). ದೊಡ್ಡ ಪರ್ವತ ಚಿಕ್ಕ ಕನ್ನಡಿಯಲ್ಲಿ ಪ್ರತಿಬಿಂಬವಾಗುವುದು, 2). ಹೊರಹೋಗುವ ಸಾಮರ್ಥ್ಯವಿದ್ದರೂ ತಾನಿದ್ದ ಕೂಪದಲ್ಲೇ ಇರುವ ಕಪ್ಪೆ, 3). ಎಲ್ಲರಿಗೂ ಕೇಳಿಸುವಂತೆ ದೊಡ್ಡ ಧ್ವನಿಯಲ್ಲಿ ಮಾತಾಡುವ ಶಕ್ತಿಯಿದ್ದರೂ ಕೈಯಿಂದ ಬಾಯಿ ಮುಚ್ಚಿಕೊಂಡು ಮಾತಾಡಿದಂತೆ, ಆ ವ್ಯಷ್ಟಿಜೀವಗಳು ತಮ್ಮನ್ನು ಆ ಅತಿ ಚಿಕ್ಕ ಉಪಾಧಿಗೆ ಸೀಮಿತಗೊಳಿಸಿಕೊಳ್ಳುತ್ತವೆ. ಈ ದೃಷ್ಟಾಂತಗಳನ್ನು ಇನ್ನೊಂದು ರೀತಿಯಲ್ಲೂ ವ್ಯಾಖ್ಯಾನಿಸಬಹುದೆನ್ನುತ್ತಾರೆ ಶ್ರೀಮತ್ ಆನಂದಬೋಧೇಂದ್ರ ಸರಸ್ವತಿ ಸ್ವಾಮಿಗಳು. ಹಾಗೆ ಹೇಳಲು ಶ್ಲೋಕದಲ್ಲಿನ ಶಬ್ದಗಳು ಅವಕಾಶ ಮಾಡಿಕೊಡುತ್ತವೆ. ಪರಿತ್ಯಜ್ಯೆ ೖವ ತದ್ಬಾಹ್ಯಂ ತತಸ್ತಾರಕಕೋಟರೇ | ಅಂತರ್ಭಾತಿ ಬಹಿಷ್ಠೋತಿ ಪರ್ವತೋ ಮುಕುರೇ ಯಥಾ | ಕೂಪಸಂಸ್ಥೊ ಯಥಾ ದೇಹಃ ಸಮುದ್ಗಕಗತಂ ವಚಃ || ‘ಪರಿತ್ಯಜ್ಯೆ ೖವ ತದ್​ಬಾಹ್ಯಂ’ ಇತ್ಯಾದಿ ಮೊದಲ ಭಾಗದಲ್ಲಿ ಬಂದ ವಿಷಯಕ್ಕೆ ಮುಂದಿನ ಮೂರು ದೃಷ್ಟಾಂತಗಳನ್ನು ಕೊಡಲಾಗಿದೆ. ಹೊರಗೆಲ್ಲೋ ಇರುವ ವಸ್ತುಗಳು ಸ್ವಪ್ನದಲ್ಲಿ ಮತ್ತು ಕಲ್ಪನಾಲೋಕದಲ್ಲಿ ತೋರುತ್ತವೆ. ಆದರೆ ನೋಡುವವನ ಮನಸ್ಸಿಗಿಂತ ಹೊರಗಿರುವಿಕೆ ಆಗ ತೋರುವುದಿಲ್ಲ. ಹೊರಗಿರುವಿಕೆ ಎಂಬ ಅಂಶವನ್ನು ಬಿಟ್ಟು ಅವು ಒಳಗೇ ತೋರುತ್ತವೆ. ಹೇಗೆಂದರೆ - ಹೊರಗಿರುವ ಪರ್ವತ ಕನ್ನಡಿಯಲ್ಲಿ ತೋರುವಂತೆ, ಹೊರಗೆ ನಿಂತ ವ್ಯಕ್ತಿಯ ದೇಹ ಬಾವಿಯ ನೀರಿನಲ್ಲಿ ತೋರುವಂತೆ, ಹೊರಗಿನ ಧ್ವನಿಯು ಗುಹೆಯೇ ಮೊದಲಾದ ಆವರಣದ ಒಳಗೆ ಪ್ರತಿಧ್ವನಿತವಾಗುವಂತೆ ಸ್ವಪ್ನ ಮತ್ತು ಕಲ್ಪನಾಲೋಕಗಳಲ್ಲಿ ಹೊರಗಿರುವಿಕೆಯನ್ನು ಬಿಟ್ಟ ದೃಶ್ಯಗಳು ತೋರುತ್ತವೆ.

ಏಕೆಂದರೆ ‘ಚಿತ್ತಂ ಚೇತ್ಯಾರ್ಥತಾಮಿವ’ - ಚಿತ್ತವು ತನ್ನನ್ನು ತಾನು ವಿಷಯಗಳಂತೆ ತೋರಿಕೊಳ್ಳುತ್ತದೆ. ತನ್ನಲ್ಲಿರುವ ವಾಸನೆಗಳಿಗನುಸಾರ ಅದು ವಿಷಯಾಕಾರಗಳನ್ನು ತೆಗೆದುಕೊಳ್ಳುತ್ತದೆ. ಆ ವಾಸನೆಗಳೆಲ್ಲ ಸಂಕುಚಿತ ದೃಷ್ಟಿಯವುಗಳಾದ್ದರಿಂದ ತನ್ನ ಸ್ವರೂಪವನ್ನು ಸಂಕುಚಿತವೆಂದು ಭಾವಿಸುತ್ತ ಅದೇ ಶರೀರದಲ್ಲೇ ವ್ಯಷ್ಟಿ ಜೀವಗಳು ಸ್ವಪ್ನಾದಿ ವಾಸನಾಮಯ ದೃಶ್ಯಗಳನ್ನು ನೋಡುತ್ತ ಸಂಸಾರದಲ್ಲಿ ಮುಳುಗಿರುತ್ತವೆ.

ಇದನ್ನು ಹೇಳುವ ಮೂಲಕ ವಸಿಷ್ಠರ ಉಪದೇಶ ಮುಂದುವರಿಯುತ್ತಿದೆ. ‘ಶ್ರೀರಾಮ! ಸ್ವಪ್ನ ಮತ್ತು ಕಲ್ಪನಾಲೋಕದಲ್ಲಿ ಮುಳುಗಿರುವ ಅತ್ಯಂತ ಚಿಕ್ಕವನಾದ ಮತ್ತು ಚೈತನ್ಯಸ್ವರೂಪಿ ಜೀವನು ತನ್ನ ಅಣುಗಾತ್ರದ ಶರೀರದಲ್ಲೇ ವಾಸನಾಮಯ ವಿಷಯಗಳನ್ನು ನೋಡುತ್ತಾನೆ. ನಕ್ಷತ್ರದಂತಿರುವ ಚಿಕ್ಕ ಶರೀರದಲ್ಲಿದ್ದೇ ಅವನು ತಾನೇ ಸ್ವತಃ ಸ್ವತಂತ್ರ ಚೈತನ್ಯದಂತಿರುತ್ತಾನೆ. ಹಿಂದೆ ಹೇಳಿದ ವಾಸನಾಮಯ ಸೂಕ್ಷ್ಮಶರೀರ ದೃಷ್ಟಿಯಿಂದ ಅವನನ್ನು ನೋಡಿದರೆ ಬುದ್ಧಿ ಚಿತ್ತಾದಿಗಳಾಗಿಯೇ ತೋರುತ್ತಾನೆ. ಪರಮಾರ್ಥದೃಷ್ಟಿಯಿಂದ ನೋಡಿದರೆ ಸತ್, ಚಿತ್, ಆನಂದಸ್ವರೂಪಿಯಾಗಿ ಕಾಣುತ್ತಾನೆ. ಇಂಥ ಜೀವಾಕಾಶನು (ಆಕಾಶಸ್ವರೂಪದ ಜೀವ) ಹೇಗೆ ಜಾಗ್ರದವಸ್ಥೆ ಪಡೆಯುತ್ತಾನೆಂದು ಹೇಳುತ್ತೇನೆ. (ಈ ತನಕ ಸೂಕ್ಷ್ಮಶರೀರದ ಮೂಲಕವೇ ವ್ಯವಹರಿಸುತ್ತಿರುವುದರಿಂದ ಈ ತನಕದ ವ್ಯವಹಾರಗಳೆಲ್ಲ ಸ್ವಪ್ನಾವಸ್ಥೆಯವುಗಳೇ ಆಗಿದ್ದವು.) ಆ ಜೀವಾಕಾಶ ತಾನಾಗಿ ಹೊರಗೆ ನೋಡುತ್ತೇನೆಂಬ ಭಾವನೆಯಿಂದ ಹೊರಗಿನ ಆಕಾಶದಲ್ಲಿ ದೃಷ್ಟಿ ಹೊರಹಾಕುವಂತೆ ಗಮನ ಹರಿಸುತ್ತಾನೆ. ಆಗ ಅವನಿಗೆ ಉಂಟಾದ ಎರಡು ರಂಧ್ರಗಳಿಂದಲೇ ಮುಂದೆ ಬರಲಿರುವ ಬಾಹ್ಯಸ್ಥೂಲ ವಿಷಯಗಳನ್ನು ನೋಡುತ್ತಾನೆ. ಯಾವ ಎರಡು ರಂಧ್ರಗಳಿಂದ ಜೀವಾಕಾಶನು ನೋಡಿದನೋ ಅವೇ ಮುಂದೆ ಕಣ್ಣುಗಳೆಂಬ ಹೆಸರು ಪಡೆಯಲಿವೆ. ಮುಂದೆ ಸ್ಥೂಲಶರೀರ ಬಂದ ನಂತರ ಸೂಕ್ಷ್ಮಶರೀರದ ಈ ರಂಧ್ರದ್ವಯಗಳೇ ಕಣ್ಣುಗುಡ್ಡೆಗಳಲ್ಲಿ ಕೆಲಸಮಾಡುವ ಮೂಲಕ ಚಕ್ಷುರಿಂದ್ರಿಯವೆಂಬ ಹೆಸರು ಪಡೆಯುತ್ತವೆ.

ಯಾವ ಸಂಕಲ್ಪದಿಂದ ಅವನು ಸ್ಪರ್ಶಜ್ಞಾನ ಪಡೆಯಬೇಕೆಂದು ಸ್ಪಂದಿಸಿದನೋ ಅದೇ ಸಂಕಲ್ಪದಿಂದ ಅದೇ ಸ್ಪಂದನೆ ಸ್ಪರ್ಶನೇಂದ್ರಿಯವಾಯಿತು. ಮುಂದೆ ಸ್ಥೂಲಶರೀರದಲ್ಲಿ ಅದು ಚರ್ಮದಲ್ಲಿ ಸೇರಿಕೊಳ್ಳಲಿದೆ. ಶಬ್ದ ಕೇಳಬೇಕೆಂಬ ಸಂಕಲ್ಪದಿಂದ ಉಂಟಾದ ಸ್ಪಂದನೆ ಶ್ರೋತ್ರೇಂದ್ರಿಯವಾಯಿತು. ಅದೇ ಶ್ರೋತ್ರೇಂದ್ರಿಯ ಮುಂದೆ ಸ್ಥೂಲಶರೀರದ ಕಿವಿಗಳಲ್ಲಿ ತನ್ನ ಸ್ಥಾನ ಪಡೆದುಕೊಳ್ಳಲಿದೆ. ಪರಿಮಳವನ್ನು ಗ್ರಹಿಸಬೇಕೆಂಬ ಸಂಕಲ್ಪದಿಂದ ಬಂದ ಸ್ಪಂದನೆ ಘ್ರಾಣೇಂದ್ರಿಯವಾಯಿತು. ಮುಂಬರಲಿರುವ ಸ್ಥೂಲಶರೀರದಲ್ಲಿ ಮೂಗು ಇದರ ಸ್ಥಾನ. ರುಚಿ ನೋಡಬೇಕೆಂಬ ಸಂಕಲ್ಪದಿಂದ ಬಂದ ಸ್ಪಂದನೆ ರಸನೇಂದ್ರಿಯವಾಯಿತು. ಮುಂಬರಲಿರುವ ಸ್ಥೂಲಶರೀರದಲ್ಲಿ ನಾಲಿಗೆ ಇದರ ಸ್ಥಾನ.’ ಹೀಗೆ ಆ ಜೀವಾಕಾಶನು ಸೂಕ್ಷ್ಮಶರೀರದಲ್ಲಿ ಜ್ಞಾನೇಂದ್ರಿಯಗಳನ್ನು ಪಡೆದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net