

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಗಾಜಾ ಯುದ್ಧದ ಕುರಿತು ಮಾಜಿ ನೀಲಿ ತಾರೆ ಮಿಯಾ ಖಲೀಫಾ ಎಕ್ಸ್ ಖಾತೆಯಲ್ಲಿ ಮಾಡಿರುವ ಕಾಮೆಂಟ್ವೊಂದು ಇದೀಗ ವಿವಾದದ ಬಿರುಗಾಳಿ ಎಬ್ಬಿಸಿದೆ.
ಮಿಯಾಳ ಕಾಮೆಂಟ್ ಏನು? ಫೋನ್ಗಳನ್ನು ತಿರುಗಿಸಿ ಮತ್ತು ಅಡ್ಡಲಾಗಿ ಶೂಟ್ ಮಾಡುವಂತೆ ಯಾರಾದರೊಬ್ಬರು ಪ್ಯಾಲೆಸ್ತೀನ್ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಹೇಳುವಿರಾ ಎಂದು ಮಿಯಾ ಖಲೀಫಾ ಶನಿವಾರ (ಅ.7) ಎಕ್ಸ್ ಖಾತೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಯುದ್ಧ ಪೀಡಿತ ಪ್ರದೇಶದಲ್ಲಿ ಹಮಾಸ್ ಉಗ್ರರು, ಇಸ್ರೇಲ್ ನಾಗರಿಕರನ್ನು ಮನಬಂದಂತೆ ದಂಡಿಸುತ್ತಿದ್ದು, ಕೊಲೆ, ಅತ್ಯಾಚಾರ ಮುಂತಾದ ಹೀನ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೆ ಮಿಯಾ ಮಾಡಿರುವ ಕಾಮೆಂಟ್ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ವ್ಯವಹಾರ ಒಪ್ಪಂದ ರದ್ದು ಮಿಯಾಳ ಕಾಮೆಂಟ್ ಅನೇಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಹೀಗಾಗಿ ಆಕೆಯ ವಿರುದ್ಧ ಟೀಕಾ ಪ್ರಹಾರ ನಡೆಯುತ್ತಿದೆ. ಆಕೆಯ ಕಾಮೆಂಟ್ ವೈರಲ್ ಆಗುತ್ತಿದ್ದಂತೆ ಕೆನಡಾದ ಬ್ರಾಡ್ಕಾಸ್ಟರ್ ಮತ್ತು ರೆಡಿಯೋ ಹೋಸ್ಟ್ ಟೋಡ್ ಶಪಿರೋ ಅವರು ಮಿಯಾ ಜತೆಗಿನ ವ್ಯಾಪಾರ ಒಪ್ಪಂದವನ್ನು ಕಡಿದುಕೊಂಡಿದ್ದಾರೆ. ಮಿಯಾ ಜತೆಗಿನ ವ್ಯಾಪಾರ ಒಪ್ಪಂದದ ಅಂತಿಮ ಹಂತದಲ್ಲಿದ್ದ ಶಪಿರೋ, ಕಾಮೆಂಟ್ ಬಗ್ಗೆ ತಿಳಿಯುತ್ತಿದ್ದಂತೆ ತಕ್ಷಣವೇ ಒಪ್ಪಂದದಿಂದ ಕೈಬಿಟ್ಟಿದ್ದಾರೆ. ಮೊದಲ ಮಾನವಳಾಗು ಮಿಯಾ ಖಲೀಫಾ, ಇದೊಂದು ಭಯಾನಕ ಟ್ವೀಟ್. ನಿಮ್ಮನ್ನು ತಕ್ಷಣವೇ ವ್ಯಾಪಾರ ಒಪ್ಪಂದದಿಂದ ಪರಿಣಾಮಕಾರಿಯಾಗಿ ವಜಾಗೊಳಿಸಲು ಪರಿಗಣಿಸಲಾಗಿದೆ. ನಿಮ್ಮ ಟ್ವೀಟ್ ನಿಜಕ್ಕೂ ಅಸಹ್ಯಕರ ಮತ್ತು ಅಸಹ್ಯವನ್ನು ಮೀರಿದ್ದು. ದಯವಿಟ್ಟು ವಿಕಸನ ಹೊಂದಿ ಮತ್ತು ಒಳ್ಳೆಯ ಮನುಷ್ಯಳಾಗಿ. ನೀವು ಸಾವು, ಅತ್ಯಾಚಾರ, ಹಲ್ಲೆ ಮತ್ತು ಒತ್ತೆಯಾಳಾಗಿ ಇರಿಸಿಕೊಳ್ಳುವುದನ್ನು ಮನ್ನಿಸುತ್ತಿರುವಿರಿ ಎಂಬುದು ನಿಜವಾಗಿಯೂ ದುರಾದೃಷ್ಟಕರವಾಗಿದೆ. ನಿಮ್ಮ ದಡ್ಡತನವನ್ನು ವಿವರಿಸಲು ಪದಗಳೇ ಇಲ್ಲ. ಮುಖ್ಯವಾಗಿ ಹೇಳಬೇಕೆಂದರೆ, ದುರಂತದ ಸಮಯದಲ್ಲಿ ಎಲ್ಲರೂ ಒಗ್ಗೂಡಬೇಕಿದೆ. ಮೊದಲು ನೀವೊಬ್ಬ ಉತ್ತಮ ವ್ಯಕ್ತಿಯಾಗಲು ನಾನು ಪ್ರಾರ್ಥಿಸುತ್ತೇನೆ ಎಂದು ಶಪಿರೋ ಅವರು ಎಕ್ಸ್ ಮಾಡಿದ್ದಾರೆ.
ಮಿಯಾ ಪ್ರತಿಕ್ರಿಯೆ ಏನು? ಶಪಿರೋ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಮಿಯಾ, ಪ್ಯಾಲೆಸ್ತೀನ್ ಅನ್ನು ಬೆಂಬಲಿಸಿದ್ದರಿಂದ ನಾನು ವ್ಯಾಪಾರ ಅವಕಾಶಗಳನ್ನು ಕಳೆದುಕೊಂಡಿರಬಹುದು ಆದರೆ, ಝಿಯೋನಿಸ್ಟ್ಗಳ ಜತೆ ನಾನು ಉದ್ಯಮಕ್ಕೆ ಕಾಲಿಡುತ್ತಿರುವ ಬಗ್ಗೆ ಮೊದಲೇ ಪರಿಶೀಲಿಸಿಕೊಳ್ಳದಿದ್ದಕ್ಕೆ ನನ್ನ ಮೇಲೆಯೇ ನನಗೆ ಕೋಪ ಎಂದು ಶಪಿರೋ ಟ್ವೀಟ್ಗೆ ಮಿಯಾ ತಿರುಗೇಟು ನೀಡಿದ್ದಾರೆ.
ಹಿಂಸೆಯನ್ನು ಹರಡುತ್ತಿಲ್ಲ ಇದೇ ಸಂದರ್ಭದಲ್ಲಿ ಮಿಯಾ ತಮ್ಮ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದರು. ನಾನು ನೀಡಿದ ಹೇಳಿಕೆ ಯಾವುದೇ ರೂಪದಲ್ಲಿ ಹಿಂಸೆಯ ಹರಡುವಿಕೆಯನ್ನು ಪ್ರಚೋದಿಸುವುದಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಮಾತಿನಲ್ಲಿ ನಾನು ನಿರ್ದಿಷ್ಟವಾಗಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿದ್ದೇನೆ. ಏಕೆಂದರೆ ಅವರು ಪ್ಯಾಲೇಸ್ತೀನಿಯನ್ನು ನಾಗರಿಕರು ಮತ್ತು ಅವರು ಪ್ರತಿದಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಮಿಯಾ ತಿಳಿಸಿದ್ದಾರೆ.
ಸದ್ಯದ ಮಾಹಿತಿ ಮೇರೆಗೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ದಾಳಿ-ಪ್ರತಿದಾಳಿಯಲ್ಲಿ 1600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್)