

ಆರ್.ತುಳಸಿಕುಮಾರ್
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಕೆಐಎ) ಮೆಟ್ರೋ ಸಂಪರ್ಕ ಕಲ್ಪಿಸಲು ಕೆ.ಆರ್.ಪುರದಿಂದ ಹೆಬ್ಬಾಳದ ರಿಂಗ್ ರೋಡ್‌ವರೆಗೆ ಕೈಗೆತ್ತಿಕೊಂಡಿರುವ ಕಾಮಗಾರಿಯಿಂದಾಗಿ ಇಲ್ಲಿನ ಸರ್ವಿಸ್ ರಸ್ತೆ ತೀರಾ ಹಾಳಾಗಿದ್ದು, ವಾಹನ ಸಂಚಾರಕ್ಕೆ ಸಂಚಕಾರ ಒದಗಿದೆ.
ವರ್ತುಲ ರಸ್ತೆಯ ಮಧ್ಯೆಯೇ ಮೆಟ್ರೋ ಹಾದುಹೋಗುವಂತೆ ಮಾರ್ಗ ವಿನ್ಯಾಸ ಮಾಡಿರುವುದರಿಂದ ಹಾಲಿ ರಸ್ತೆಯಲ್ಲಿ ಮೂರು ಪಥದ ಬದಲು ಎರಡು ಪಥಕ್ಕೆ ಸಂಚಾರ ಸೀಮಿತವಾಗಿದೆ. ಇದರಿಂದಾಗಿ ಇಡೀ ಮಾರ್ಗದಲ್ಲಿ ನಿತ್ಯವೂ ಬೆಳಗ್ಗೆಯಿಂದ ರಾತ್ರಿವರೆಗೂ ಸಂಚಾರ ವ್ಯತ್ಯಯವಾಗುತ್ತಿದೆ. ರಿಂಗ್ ರಸ್ತೆಯನ್ನು ವೈಟ್ ಟಾಪಿಂಗ್‌ಗೆ ಬದಲಾಯಿಸಿದ್ದರೂ, ಪಥಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಸಾಗರೋಪಾದಿಯಾಗಿ ಬರುವ ವಾಹನಗಳು ನಿಧಾನವಾಗಿ ಚಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಹೆಬ್ಬಾಳದಿಂದ ರಾಮಮೂರ್ತಿನಗರ ಜಂಕ್ಷನ್‌ಗಳ ಬಳಿ ವಾಹನಗಳ ಒಂದು ಕಡೆಯಿಂದ ಇನ್ನೊಂದೆಡೆಗೆ ತೆರಳಲು ಸರ್ವಿಸ್ ರಸ್ತೆ ಬಳಸಬೇಕಿದೆ. ಇದರಿಂದಾಗಿ ಜಂಕ್ಷನ್‌ಗಳಲ್ಲಿ ಸಮರ್ಪಕವಾಗಿ ತಿರುವುಗಳಿಲ್ಲದ ಕಾರಣ ಕೃತಕ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಬಸ್ ನಿಲ್ದಾಣಗಳ ಬಳಿ ಬಿಎಂಟಿಸಿ ವಾಹನಗಳು ನಿಲ್ಲಲು ಪ್ರತ್ಯೇಕ ಬಸ್ ಬೇ ಇಲ್ಲದೆ ರಸ್ತೆಯಲ್ಲೇ ನಿಲ್ಲಬೇಕಿದೆ. ಇದು ಕೂಡ ವಾಹನ ಸಂಚಾರ ನಿಧಾನವಾಗಲು ಕಾರಣವಾಗಿದೆ.
ಇತ್ತೀಚಿಗೆ ಮೆಟ್ರೋ ಕಾಮಗಾರಿಗಾಗಿ ರಿಂಗ್ ರಸ್ತೆಯಲ್ಲಿದ್ದ ಸ್ಕೈವಾಕ್‌ಗಳನ್ನು ತೆರವು ಮಾಡಿರುವುದರಿಂದ (ಮಾನ್ಯತಾ ಟೆಕ್ ಪಾರ್ಕ್ ಬಳಿ ಹೊರತುಪಡಿಸಿ) ರಸ್ತೆ ದಾಟಲು ಪಾದಚಾರಿಗಳು ಹರಸಾಹಸ ಮಾಡಬೇಕಿದೆ. ರಾತ್ರಿ ವೇಳೆ ಪ್ರಯಾಣಿಕರು ಬಸ್ ಇಳಿದು ಇನ್ನೊಂದು ಬದಿ ತೆರಳು ಜೀವನವನ್ನು ಕೈಯಲ್ಲಿ ಹಿಡಿದು ತೆರಳಬೇಕಾದ ಸ್ಥಿತಿ ಇದೆ. ಜಂಕ್ಷನ್‌ಗಳು ಸೇರಿ ದಟ್ಟಣೆ ಉಂಟಾಗುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಪೇದೆಗಳನ್ನು ನಿಯೋಜಿಸದ ಕಾರಣ ಸವಾರರು ಅಡ್ಡಾದಿಡ್ಡಿಯಾಗಿ ಸಂಚರಿಸಲು ಅವಕಾಶ ನೀಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸರ್ವಿಸ್ ರಸ್ತೆ ಅಧ್ವಾನಕ್ಕೆ ಸವಾರರು ಹೈರಾಣ:
ಇತ್ತೀಚಿಗೆ ವೀರಣ್ಣನಪಾಳ್ಯದಿಂದ ಹೆಬ್ಬಾಳದ ಕಡೆ ಸಾಗುವ ಸರ್ವಿಸ್ ರಸ್ತೆ ತೀರಾ ಹಾಳಾಗಿದ್ದು ದುರಸ್ತಿಪಡಿಸುವಂತೆ ನಾಗರಿಕರು ಸ್ಥಳೀಯ ಶಾಸಕ ಕೃಷ್ಣಬೈರೇಗೌಡಗೆ ‘ಎಕ್ಸ್’ ಮೂಲಕ ವಿನಂತಿಸಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕರು, ಬಿಬಿಎಂಪಿ ಅಥವಾ ಬಿಎಂಆರ್‌ಸಿಎಲ್ ರಸ್ತೆ ದುರಸ್ತಿಪಡಿಸುವಂತೆ ವಿನಂತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿತ್ತು. ಆ ಬಳಿಕ ವಾರದೊಳಗೆ 1 ಕಿ.ಮೀ. ವರೆಗೆ ಡಾಂಬರು ಹಾಕಿದ್ದು, ಉಳಿದ ಭಾಗವನ್ನು ಹಾಗೆಯೇ ಬಿಡಲಾಗಿದೆ. ಸದ್ಯ ಹೆಬ್ಬಾಳದ ಬಸ್ ಡಿಪೋ ಬಳಿ ಮೆಟ್ರೋ ಕಾಮಗಾರಿಗಾಗಿ ಸರ್ವಿಸ್ ರಸ್ತೆಯನ್ನು ಬಂದ್ ಮಾಡಲಾಗಿದೆ. ನಾಗವಾರ ಕೆರೆ ಬಳಿಯಿಂದ ವಾಹನಗಳ ಸಂಚಾರಕ್ಕೆ ಅವಕಾಶ ಇದ್ದರೂ, ಭಾರಿ ಗಾತ್ರದ ಗುಂಡಿಗಳಿಂದಾಗಿ ಸವಾರರು ಇಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಪರಿಸ್ಥಿತಿ ರಾಮಮೂರ್ತಿನಗರ ಜಂಕ್ಷನ್‌ವರೆಗೂ ಕಂಡುಬಂದಿದ್ದು, ಸರ್ವಿಸ್ ರಸ್ತೆಯು ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ಸುಮಾರು 9 ಕಿ.ಮೀ. ಉದ್ದಕ್ಕೂ ನೂರಾರು ಗುಂಡಿಗಳು ಉಂಟಾಗಿದ್ದರೆ, ಕೆಲವೆಡೆ ಕೆಲ ನೂರು ಮೀಟರ್‌ವರೆಗೆ ಇಡೀ ಸರ್ವಿಸ್ ರಸ್ತೆ ಹಾಳಾಗಿದೆ. ಇದನ್ನು ದುರಸ್ತಿಪಡಿಸಲು ಸಂಬಂಧಿಸಿದ ಸರ್ಕಾರಿ ಸಂಸ್ಥೆ ಮುಂದಾಗದ ಕಾರಣ ನಾಗರಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಮಳೆ ಬಂದಾಗ ಸರ್ವಿಸ್ ರಸ್ತೆಯಲ್ಲಿ ಸಾಗುವುದು ದುಸ್ತರವಾಗಿದೆ.
ಪೇದೆಗಳ ನಿಯೋಜನೆಗೆ ಹಿಂದೇಟು:
ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ರಿಂಗ್ ರಸ್ತೆ ಉದ್ದಕ್ಕೂ ನಾಗರಿಕರ ಅನುಕೂಲಕ್ಕಾಗಿ ಸಂಚಾರ ಪೇದೆ/ಹೋಂಗಾರ್ಡ್‌ಗಳನ್ನು ನಿಯೋಜಿಸುವುದಾಗಿ ಬಿಎಂಆರ್‌ಸಿಎಲ್ ಹಿಂದೆಯೇ ಭರವಸೆ ನೀಡಿತ್ತು. ಆರಂಭದಲ್ಲಿ ಕೆಲ ಸಮಯ ನಿಯೋಜಿಸಿದ್ದರೂ, ನಂತರದಲ್ಲಿ ವಾಪಸ್ ಕರೆಯಿಸಿಕೊಳ್ಳಲಾಗಿದೆ. ಇದರಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿದೆ. ಚಾಲಕರಲ್ಲಿ ಪಥ ಶಿಸ್ತು ತರಲು ಪೊಲೀಸರು ಮುಂದಾಗುವ ಬದಲು ರಸ್ತೆ ಉದ್ದಕ್ಕೂ ವಾಹನ ನಿಷೇಧಿಸುವ ನೋ ಪಾರ್ಕಿಂಗ್ ಲಕಗಳನ್ನು ಹಾಕಿ ಕೈತೊಳೆದುಕೊಂಡಿದೆ. ಪ್ರತಿನಿತ್ಯ ದಟ್ಟಣೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪೇದೆಗಳನ್ನು ನಿಯೋಜಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ವಾಹನ ದಟ್ಟಣೆ ಎಲ್ಲೆಲ್ಲಿ?:
ಹೆಬ್ಬಾಳ ಜಂಕ್ಷನ್
ವೀರಣ್ಣನಪಾಳ್ಯ
ಮಾನತ್ಯಾ ಟೆಕ್ ಪಾರ್ಕ್
ನಾಗವಾರ
ಹೆಣ್ಣೂರು
ಕಲ್ಯಾಣನಗರ
ಎಚ್‌ಬಿಆರ್ ಲೇಔಟ್
ರಾಮಮೂರ್ತಿನಗರ ಜಂಕ್ಷನ್
ರಿಂಗ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಸಮೀಪದ ಸ್ಥಳಗಳಿಗೆ ತೆರಲು ಬಳಸು ದಾರಿ ಹಿಡಿಯಬೇಕಿದೆ. ಒಂದು ಕಿ.ಮೀ. ಹೋಗಿಬರಲು ನಾಲ್ಕಾರು ಕಿ.ಮೀ. ತೆರಳಬೇಕಿದೆ. ಸರ್ವಿಸ್ ರಸ್ತೆ ಹಾಳಾಗಿರುವ ಕಾರಣ ದಟ್ಟಣೆ ಅವಧಿಯಲ್ಲಿ ತೆರಳಲು ಸರ್ಕಸ್ ಮಾಡಬೇಕಿದೆ.
- ಮಂಜುನಾಥ್, ಹೆಬ್ಬಾಳ
ವರ್ತುಲ ರಸ್ತೆಯ ಆಸುಪಾಸಿನಲ್ಲಿರುವ ಕಂಪನಿಗಳಲ್ಲಿ ಕೆಲಸ ಮಾಡುವ ನಮ್ಮಂತಹ ಉದ್ಯೋಗಿಗಳಿಗೆ ರಿಂಗ್ ರೋಡ್ ಟ್ರಾಫಿಕ್ ನಿದ್ದೆಯಲ್ಲೂ ಭಯ ಮೂಡಿಸುತ್ತದೆ. ಗಂಟೆಗಟ್ಟಲೇ ರಸ್ತೆಯಲ್ಲೇ ಸಿಲುಕುವ ಕಾರಣ ಆಫೀಸಿಗೆ ತಡವಾಗಿ ಹೋಗಬೇಕಾಗಿದೆ. ಸರ್ವಿಸ್ ರಸ್ತೆಯನ್ನು ದುರಸ್ತಿಪಡಿಸಿದರೆ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ.
- ಆನಂದ್ ಜಯಣ್ಣ, ಕಲ್ಯಾಣನಗರ