

ಸೂರತ್: ಸೂರತ್ ಮೆಟ್ರೋ ರೈಲು ಪ್ರಾಜೆಕ್ಟ್ನಲ್ಲಿ ತೊಡಗಿದ್ದ ಹೈಡ್ರಾಲಿಕ್ ಲಾಂಚರ್ ಕ್ರೇನ್ ಇಂದು (ಆ.22) ನಗರದ ನಾನಾ ವರಚಾ ಪ್ರದೇಶದ ಬಂಗಲೆ ಮೇಲೆ ನೋಡ ನೋಡುತ್ತಿದ್ದಂತೆ ದಿಢೀರ್ ಕುಸಿದು ಬಿದ್ದಿದೆ.
ಇದನ್ನೂ ಓದಿ: ಶ್….ಕೋಟೆನಾಡಿಗೆ ಸೆಕೆಯ ಶಾಖ್…!
ನಗರದ ಚಿಕುವಾಡಿ ಪ್ರದೇಶದಲ್ಲಿ ಇಂದು ಸಂಜೆ ಈ ಘಟನೆ ಸಂಭವಿಸಿದ್ದು, ಕ್ರೇನ್ ಮೆಟ್ರೋ ಕಾರಿಡಾರ್ ಪಿಲ್ಲರ್ ಸರಿಪಡಿಸುವ ವೇಳೆ ಎಡವಟ್ಟಾಗಿ ಕೆಳಗಿದ್ದ ಬಂಗಲೆಯ ಮೇಲೆ ಕುಸಿದು ಬಿದ್ದಿದೆ. ಕ್ರೇನ್ ಬಿದ್ದ ರಭಸಕ್ಕೆ ಅಕ್ಕಪಕ್ಕದಲ್ಲಿದ್ದ ಕೆಲವು ಮರಗಳು ಮತ್ತು ಕಾರುಗಳಿಗೆ ಹಾನಿಯಾಗಿವೆ. ಆದಾಗ್ಯೂ, ಕಟ್ಟಡಕ್ಕೆ ಬೀಗ ಹಾಕಲಾಗಿದ್ದ ಕಾರಣ ಒಳಗೆ ಯಾರೂ ಇರಲಿಲ್ಲ . ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಪ್ರತ್ಯಕ್ಷದರ್ಶಿ ಸಂದೀಪ್ ಪಟೇಲ್ ಹೇಳಿಕೆ ಪ್ರಕಾರ, "ಪಿಲ್ಲರ್ ಅಳವಡಿಕೆಯ ಸಮಯದಲ್ಲಿ ಕ್ರೇನ್ ಕೊಂಚ ಹಿಂದೆ ಮುಂದೆ ಜರುಗಿತು. ಇದರಿಂದಾಗಿ ಕ್ರೇನ್ ಕಟ್ಟಡದ ಮೇಲೆ ಕುಸಿಯಿತು. ಕೆಳಗಿದ್ದ ಒಂದಷ್ಟು ಕಾರುಗಳು ಜಖಂಗೊಂಡಿವೆ. ಆದ್ರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).