

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಕರೊನಾ ದೆಸೆಯಿಂದ ಎಸ್ಸೆಸ್ಸೆಲ್ಸಿ, ಸೆಕೆಂಡ್ ಪಿಯುಸಿಯ ಶೇ.100 ರಷ್ಟು ವಿದ್ಯಾರ್ಥಿಗಳಿಗೆ ಪಾಸಾಗುವ ಭಾಗ್ಯ ದೊರೆತಿದೆ. ಅದರ ಬೆನ್ನಲ್ಲೇ ಬಿಸಿಎಂ ಇಲಾಖೆ ನಗರ ಪ್ರದೇಶದ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ಪ್ರವೇಶಕ್ಕೆ ನೂಕು ನುಗ್ಗಲು ಉಂಟಾಗಿದೆ.
ಹಿಂದಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಶೇ.70 ಹಾಗೂ ಸೆಕೆಂಡ್ ಪಿಯುಸಿ ಶೇ.60 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಇದರಿಂದ ಸೀಟು ಹಂಚಿಕೆ ಕಷ್ಟವಾಗುತ್ತಿರಲಿಲ್ಲ. ಈ ಬಾರಿ ಎಲ್ಲ ವಿದ್ಯಾರ್ಥಿಗಳು ಪಾಸಾಗಿರುವುದರಿಂದ ನೂರು ವಿದ್ಯಾರ್ಥಿಗಳ ಸಾಮರ್ಥ್ಯದ ಹಾಸ್ಟೆಲ್‌ನಲ್ಲಿ ಕನಿಷ್ಠ 30-40 ಮಂದಿಗೆ ಹೆಚ್ಚುವರಿಯಾಗಿ ಅವಕಾಶ ಕಲ್ಪಿಸಬೇಕಾಗಿದೆ.
ಕೆಲವು ಜಿಲ್ಲೆಯಲ್ಲಿ ಕನಿಷ್ಠ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಕ್ಕೆ ಕಾಯುತ್ತಿದ್ದಾರೆ. ಗ್ರಾಮೀಣ ಭಾಗಕ್ಕಿಂತ ಜಿಲ್ಲಾ ಕೇಂದ್ರಗಳಲ್ಲಿ ಬೇಡಿಕೆ ಅಧಿಕವಾಗಿದೆ. ಇದೇ ವೇಳೆ ಇಲಾಖೆಯ ಪ್ರೀ ಮೆಟ್ರಿಕ್ ಹಾಗೂ ಗ್ರಾಮೀಣ ಭಾಗದ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಿಗೆ ಬೇಡಿಕೆ ಸಾಮಾನ್ಯ ಅಥವಾ ಕೆಲವೆಡೆ ವಿಪರೀತವೆಂಬಂತೆ ಕುಸಿತವಾಗಿದೆ.
ಮೆರಿಟ್ ಆಧರಿಸಿ ಸೀಟು ಪಡೆದವರು ಒಂದೆಡೆಯಾದರೆ, ಮೆರಿಟ್ ಇಲ್ಲದಿದ್ದರೂ ಓದುವ ಹಂಬಲ ಇದ್ದವರಿಗೆ ಪ್ರವೇಶ ಕಲ್ಪಿಸುವ, ಇದಕ್ಕಾಗಿ ಜನಪ್ರತಿನಿಧಿಗಳು ಮಾಡುವ ಶಿಫಾರಸು ಪಾಲಿಸುವ ಅನಿವಾರ‌್ಯತೆ ಅಧಿಕಾರಿಗಳ ಮುಂದಿದೆ. ಹೀಗಾಗಿ ಈ ವರ್ಷಕ್ಕೆ ಸೀಮಿತವಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿನ ಸೀಟುಗಳನ್ನು ನಗರ ಪ್ರದೇಶಕ್ಕೆ ವರ್ಗಾಯಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯುತ್ತಿದ್ದಾರೆ.
ವೃತ್ತಿಪರ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಲು 3 ವರೆಗೆ ಅವಕಾಶವಿದೆ. ಇನ್ನು ಮೆಡಿಕಲ್, ಇಂಜಿನಿಯರಿಂಗ್, ಇತ್ಯಾದಿ ವೃತ್ತಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಸೀಟು ಹೊಂದಿಸುವುದು ಹೇಗೆಂಬ ಪ್ರಶ್ನೆಯೂ ಇದೆ.