

‘ಮನಸ್ಸೆಂಬ ವರಳು ಕಲ್ಲಿನಲ್ಲಿ ಇಂದ್ರಿಯಗಳೆಂಬ ಅಕ್ಕಿಯ ಹಾಕಿ ಸುಜ್ಞಾನವೆಂಬ ವಣಿಕೆಯ ಹಿಡಿದು ಪರಶಿವನ ಪರಮಾನಂದದೊಳ ಗೋಲಾಡುತ್ತ ಕುಟ್ಟಿ ಅಂಬಲಿನವೆಂಬುವ ತವುಡನೇ...’ ಎಂದು, ತ್ರಿಕರಣಗಳೆಂಬ ಅಕ್ಕಿಯನ್ನು ತೆಗೆದುಕೊಂಡು ಸದ್ಭಾವವೆಂಬ ಪಾತ್ರೆಯಲ್ಲಿ ತುಂಬಿ ಪರಮಾನಂದವೆಂಬ ಜಲವ ಆ ಭಾಂಡೆಯಲ್ಲಿ ಹಾಕಿ ಎಸರನಿಟ್ಟು ತ್ರಿಪುಟಿಯಂಬ ಒಲೆಯ ಮಾಡಿ, ಚಿದಗ್ನಿಯೆಂಬ ದುಷ್ಟಗುಣ ಸುಡುವ ಬೆಂಕಿಯ ಪುಟವನ್ನಿಕ್ಕಿ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಆರಿಷಡ್ವರ್ಗದ ಕಟ್ಟಿಗೆಯನ್ನು ಹೊತ್ತಿಸಿ ಜ್ಞಾನದೊಳಗೆ ಸುಜ್ಞಾನ ಎಂಬಂತಹ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಸಮುದಾಯ ಗುಂಪಿನೊಂದಿಗೆ ಅಖಂಡವಾದ ಮಹಾಘನ ಲಿಂಗಕ್ಕೆ ಸಲ್ಲಿಸಿ ನೀಡಬಲ್ಲಾತನೇ ಶರಣನು.
ಆತನೇ ನಿಜಾನುಭಾವಿ. ಆತನೇ ಲಿಂಗೈಕ್ಯನು. ಈ ಭೇದವನರಿಯದೆ ಮಣ್ಣಿನ ತಾಟಿನಲ್ಲಿ ಮನಸ್ಸಿಗೆ ಬಂದಂತೆ ನೀಡಿಕೊಂಡು ಬಾಯಿಗೆ ಬಂದಂತೆ ತಿನ್ನುವ ಈ ಜೀವಗಳ್ಳ ಭವಭಾರಿಗಳಿಗೆ ಏಕಭಾಜನ ಎಲ್ಲಿಂದ ಸಿಗಬೇಕು ಎಂದು ಜೇವರ್ಗಿಯ ಮಹಾಜ್ಞಾನಿ ಷಣ್ಮುಖ ಶಿವಯೋಗಿಗಳು ತಿಳಿಸಿ ಸಮಾಜದ ಜನರನ್ನು ಜಾಗೃತರನ್ನಾಗಿಸಿದ್ದಾರೆ. ಸಮಸ್ತ ಮಹಾತ್ಮರ ವಾಣಿಯನ್ನು ಪಾಲಿಸಿ ಅವರು ಮಾಡಿದ ಪಾಕದಂತೆ ನಾವೆಲ್ಲ ಮಾಡಿ ಅಂತಹ ಮಹಾಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಸಿಗುವುದು.