

ನವದೆಹಲಿ: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನ ಮೂಲ ಕಂಪನಿಯಾದ ಮೆಟಾ, ವಿವಿಧ ದೇಶಗಳಲ್ಲಿರುವ ತನ್ನ ಸುಮಾರು 3600 ಉದ್ಯೋಗಿಗಳನ್ನು ತೆಗೆದುಹಾಕುವ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಿದೆ.
ಈ ಕ್ರಮಕ್ಕೆ ಕಂಪನಿ ನೌಕರರ ಕಾರ್ಯಕ್ಷಮತೆ ಕೊರತೆಯ ಕಾರಣ ನೀಡಿದೆ. ಕೆಲಸದಿಂದ ತೆಗೆದುಹಾಕಿದ ಆದೇಶ ಈ ನೌಕರರಿಗೆ ಇಮೇಲ್ ಮೂಲಕ ತಲುಪಲಿದ್ದು, ನಂತರದ ಒಂದು ತಾಸಿನಲ್ಲಿ ಕಂಪನಿಯ ಎಲ್ಲ ವ್ಯವಸ್ಥೆಗಳಿಂದ ಅವರು ಸಂಪರ್ಕ ಕಳೆದುಕೊಳ್ಳಲಿದ್ದಾರೆ. ಈ ವಿಷಯವನ್ನು ಮೆಟಾ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ ಜಾನೆಲ್ ಗೇಲ್ ಅವರ ಆಂತರಿಕ ಸಂದೇಶ ಆಧರಿಸಿ ‘ಬಿಜಿನೆಸ್ ಇನ್ಸೈಡರ್’ ವರದಿ ಮಾಡಿದೆ.
ಕೆಲಸದಲ್ಲಿ ತೃಪ್ತಿಕರ ಸಾಧನೆ ಮಾಡದವರನ್ನು ತೆಗೆದುಹಾಕಲಾಗುವುದೆಂದು ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಕಳೆದ ತಿಂಗಳು ತಿಳಿಸಿದ್ದರು. ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಏಷ್ಯಾ ಪೆಸಿಫಿಕ್, ಯೂರೋಪ್, ಮಧ್ಯಪ್ರಾಚ್ಯ, ಆಫ್ರಿಕಾ, ಉತ್ತರ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿರುವ ನೌಕರರಿಗೆ ಫೆ. 10ರಿಂದ 18ರವರೆಗಿನ ಅವಧಿಯಲ್ಲಿ ಸೇವಾಸಮಾಪ್ತಿ (ಟರ್ವಿುನೇಶನ್) ಸಂದೇಶ ತಲುಪಲಿದೆ.